ಸಕಲ ಸರ್ಕಾರಿ ಗೌರವಗಳೊಂದಿಗೆ ಉಸ್ಮಾನ್‌ ಹಾದಿ ಅಂತ್ಯಕ್ರಿಯೆ

2 Min Read

– ʻಹಾದಿʼಯ ಒಂದು ಹನಿ ರಕ್ತವೂ ವ್ಯರ್ಥವಾಗಲ್ಲ – ಯೂನಸ್‌
– ಭಾರತ ವಿರೋಧಿ ಭಾಷಣಗಳಿಂದ ಗುರುತಿಸಿಕೊಂಡಿದ್ದ ಹಾದಿ

ಢಾಕಾ: ಬಾಂಗ್ಲಾದೇಶದ (Bangladesh) ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿಯ (Sharif Osman Hadi) ಅಂತ್ಯಕ್ರಿಯೆಯು ಬಿಗಿ ಭದ್ರತೆಗಳೊಂದಿಗೆ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಶನಿವಾರ ಅಂತ್ಯಕ್ರಿಯೆಗೆ ಪೂರ್ವ ಸಿದ್ಧತೆಯ ಭಾಗವಾಗಿ ರಾಜಧಾನಿಯಾದ್ಯಂತ ಪೊಲೀಸ್ ಮತ್ತು ಅರೆಸೇನಾಪಡೆಗಳನ್ನ ನಿಯೋಜಿಸಲಾಗಿತ್ತು. ಯಾವುದೇ ಹಿಂಸಾಚಾರಕ್ಕೆ ಆಸ್ಪದ ನೀಡದೇ ಶಾಂತಿಯುತವಾಗಿ ಅಂತ್ಯಕ್ರಿಯೆ ನಡೆಯಿತು.

ಹಾದಿಯ ಹಿರಿಯ ಸಹೋದರ ಅಬು ಬಕರ್ ಜನಾಜಾ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಇದಾದ ತಕ್ಷಣ, ಪಾರ್ಥೀವ ಶರೀರವನ್ನ ಬಿಗಿ ಭದ್ರತೆಯಲ್ಲಿ ಢಾಕಾ ವಿಶ್ವವಿದ್ಯಾಲಯದ ಆವರಣಕ್ಕೆ ಕರೆದೊಯ್ಯಲಾಯಿತು. ಬಾಂಗ್ಲಾದೇಶದ ರಾಷ್ಟ್ರಕವಿ ಕಾಜಿ ನಜ್ರುಲ್ ಇಸ್ಲಾಂ ಅವರ ಸಮಾಧಿಯ ಪಕ್ಕದಲ್ಲಿ ಉಸ್ಮಾನ್‌ಗೆ ಸಮಾಧಿ ಅಗೆಯಲಾಗಿತ್ತು. ಪಾರ್ಥೀವ ಶರೀರ ಬರುತ್ತಿದ್ದಂತೆ ಅಂತ್ಯಕ್ರಿಯೆ ಸುಸೂತ್ರವಾಗಿ ಸಾಗಿತು.

ಇನ್ನೂ ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಅಂತ್ಯಕ್ರಿಯೆ ಮೆರವಣಿಗೆ ವೇಳೆ ಸರ್ಕಾರದ ಮುಖ್ಯಸ್ಥ ಯೂನಸ್‌ (Muhammad Yunus) ವಿದಾಯ ಭಾಷಣ ಮಾಡಿದರು. ಹಾದಿ ಅವರ ಪರಂಪರೆ ಉಳಿಯುತ್ತದೆ. ಅವರ ಆದರ್ಶಗಳನ್ನ ಎತ್ತಿಹಿಡಿಯಲಾಗುತ್ತದೆ. ಹಾದಿಯ ಒಂದು ಹನಿ ರಕ್ತವೂ ವ್ಯರ್ಥವಾಗೋದಿಲ್ಲ. ಇಂದು ನೀವೆಲ್ಲ ಯಾವುದಕ್ಕಾಗಿ ನಿಂತಿದ್ದೀರೋ ಅದನ್ನ ನಾವು ಪೂರೈಸುತ್ತೇವೆ ಎಂದು ಭರವಸೆ ನೀಡಿದರು.

ಬಾಂಗ್ಲಾದೇಶ ವಿದ್ಯಾರ್ಥಿ ದಂಗೆಯ ನೇತೃತ್ವವಹಿಸಿದ್ದ ಷರೀಫ್ ಉಸ್ಮಾನ್ ಹಾದಿ ಅವರ ಮೇಲೆ, ಕಳೆದ ವಾರ ಮುಸುಕುಧಾರಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿತ್ತು. ಹಾದಿ ಅವರಿಗೆ ಸಿಂಗಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹಾದಿ ಮೃತಪಟ್ಟರು. ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರನ್ನ ಪದಚ್ಯುತಿಗೊಳಿಸುವ ಹೋರಾಟದಲ್ಲಿ ಉಸ್ಮಾನ್‌ ಹಾದಿಯ ಪಾತ್ರ ಬಹಳ ದೊಡ್ಡದಿತ್ತು.

ಉಸ್ಮಾನ್‌ ಹಾದಿ ಯಾರು?
32 ವರ್ಷದ ಶರೀಫ್ ಉಸ್ಮಾನ್ ಹಾದಿ ಅವರು ಶೇಖ್‌ ಹಸೀನಾ ಅವರ ತೀವ್ರ ವಿರೋಧಿಯಾಗಿದ್ದರು. ಬಾಂಗ್ಲಾದೇಶದಲ್ಲಿ ನಡೆದ ಜುಲೈ ತಿಂಗಳ ಪ್ರತಿಭಟನೆಯಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು, ಇದು ಮಾಜಿ ಪ್ರಧಾನಿ ಹಸೀನಾ ಅವರ ಅಧಿಕಾರ ತ್ಯಾಗಕ್ಕೆ ಕಾರಣವಾಯಿತು. ಅವಾಮಿ ಲೀಗ್ ಪಕ್ಷದ ಕಟು ವಿಮರ್ಶಕರಾಗಿದ್ದ ಹಾದಿ, ಹಸೀನಾ ಅವರ ಪಕ್ಷವನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರ ‘ಇಂಕಿಲಾಬ್ ಮಂಚ್’ ಎಂಬ ಸಂಘಟನೆ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆಗಳನ್ನು ಪ್ರೋತ್ಸಾಹಿಸುತ್ತಿತ್ತು. ಹಾದಿ ಅವರು ಢಾಕಾದ ಒಂದು ಕ್ಷೇತ್ರದಲ್ಲಿಯೂ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದರು. ಯೂನಸ್ ಸರ್ಕಾರವು ಅವರ ಪಕ್ಷವನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಿದೆ. ಹಾದಿ ಅವರ ಹತ್ಯೆಯ ಬಗ್ಗೆ ಯೂನಸ್ ಸರ್ಕಾರ ತನಿಖೆ ನಡೆಸುತ್ತಿದೆ ಮತ್ತು ಹತ್ಯೆ ಮಾಡಿದವರನ್ನು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ.

Share This Article