ರಾಜ್ಯದಲ್ಲಿ ಸರ್ಕಾರವಿದೆ ಅನ್ನೋದು ಜನರಿಗೆ ಗೊತ್ತಿಲ್ಲ: ಶೆಟ್ಟರ್

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಸರ್ಕಾರವಿದೆ ಎನ್ನುವುದು ಜನರಿಗೆ ಗೊತ್ತಿಲ್ಲ, ಇದು ಅಪವಿತ್ರ ಮೈತ್ರಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ಮಾಡಿದ್ದಾರೆ.

ನಗರದ ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಮೈತ್ರಿ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಗುಡುಗಿದ್ದಾರೆ.

ಮೈತ್ರಿ ಸರ್ಕಾರ ಪತನವಾಗುವುದು ಖಚಿತ. ಮೈತ್ರಿ ನಾಯಕರು ಏನೇ ಸ್ಟಂಟ್ ಮಾಡಿದರೂ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಭಾರೀ ದೊಡ್ಡ ಪ್ರಮಾಣದಲ್ಲಿದೆ. ಈಗ ಸಚಿವ ಸಂಪುಟ ಪುನಾರಚನೆ ಮಾಡುತ್ತೇವೆ ಎಂದು ಹೇಳುತ್ತಾರೆ. ಈಗ ಮಾಡಿದರೆ ನಾಲ್ಕು ಮಂದಿ ಸಂಪುಟದಿಂದ ಹೊರಗೆ ಹೋಗುವುದು ಒಳಗೆ ಬರುವುದು ಇದೇ ಆಗುತ್ತದೆ. ಯಾರೇ ಏನೇ ಕಸರತ್ತು ಮಾಡಿದರೂ ಈಗ ತೆರೆ ಎಳೆಯಲಾಗುತ್ತದೆ. ಮೈತ್ರಿಯಲ್ಲಿರುವ ಭಿನ್ನಮತೀಯರೇ ಸರ್ಕಾರಕ್ಕೆ ಗಡುವು ಕೊಟ್ಟಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 25+1 ಸ್ಥಾನ ಗೆದ್ದಿದೆ. ಈ ಫಲಿತಾಂಶವನ್ನು ನೋಡಿ ಇವರಿಗೆ ನೈತಿಕತೆ ಇದ್ದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು ಎಂದು ಹೇಳಿದರು.

ಮೈತ್ರಿ ಸರ್ಕಾರದಿಂದ ಜಿಂದಾಲ್ ಕಂಪನಿಗೆ 3,600 ಎಕರೆ ಜಮೀನು ಮಾರಾಟ ಕ್ರಯಪತ್ರ ಹಸ್ತಾಂತರ ವಿಚಾರದ ಬಗ್ಗೆ ಕೇಳಿದಾಗ, ಈ ಸರ್ಕಾರ ಯಾವಾಗ ಹೋಗುತ್ತದೋ ಗೊತ್ತಿಲ್ಲ. ಸರ್ಕಾರದ ಪತನಕ್ಕೆ ಅಂತಿಮ ಕ್ಷಣ ಬಂದಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಮೈತ್ರಿ ಸರ್ಕಾರ ಸರ್ಕಾರದ ಜಮೀನು ಲೂಟಿ ಮಾಡುತ್ತಿದೆ. ಇದೊಂದು ಹಗರಣ ಆಗುತ್ತದೆ ಎಂದು ಜಗದೀಶ್ ಶೆಟ್ಟರ್ ಆರೋಪ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *