ಪಾರ್ಕ್‌ನಲ್ಲಿ ಬಾಲಕನಿಗೆ ಕರೆಂಟ್ ಶಾಕ್ – ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

Public TV
2 Min Read

– 10 ಲಕ್ಷ ಅಲ್ಲ 1 ಕೋಟಿ ಕೊಟ್ಟರೂ ಮಗ ವಾಪಸ್ ಬರಲ್ಲ

ಬೆಂಗಳೂರು: ನಗರದ ಬಾಣಸವಾಡಿ ಪಾರ್ಕ್ ನಲ್ಲಿ ಕರೆಂಟ್ ಶಾಕ್ ಗೆ ಬಲಿಯಾದ ಬಾಲಕನ ಕುಟುಂಬಕ್ಕೆ ಬಿಬಿಎಂಪಿ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ.

ಘಟನಾ ಸ್ಥಳಕ್ಕೆ ಸಚಿವ ಕೆ.ಜೆ ಜಾರ್ಜ್ ಹಾಗೂ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.

ಬಾಲಕನನ್ನು ಕಳೆದುಕೊಂಡಿರುವ ದುಃಖ ನಮಗೂ ಇದೆ. ಹೀಗಾಗಿ ಕುಟುಂಬದವರಿಗೆ ಈಗಾಗಲೇ ಸಾಂತ್ವನವನ್ನು ಹೇಳಿದ್ದೇವೆ. ಸ್ಥಳಕ್ಕೆ ತೆರಳಿ ಈಗಾಗಲೇ ಪರಿಶೀಲನೆ ನಡೆಸಿದ್ದೇವೆ. ಹೀಗಾಗಿ ಎಲ್ಲಾ ವಿಚಾರಗಳಲ್ಲಿಯೂ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ರು.

ಬಿಬಿಎಂಪಿ ವತಿಯಿಂದ ಈಗಾಗಲೇ ಮೇಯರ್ ಅವರು 10 ಲಕ್ಷ ರೂ. ಪರಿಹಾರ ಕೊಡುವುದಾಗಿ ಘೋಷಿಸಿದ್ದಾರೆ. ಆದ್ರೆ ಇಲ್ಲಿ ಪರಿಹಾರ ಮುಖ್ಯವಲ್ಲ. ಇಂತಹ ಘಟನೆ ನಡೆಯಬಾರದಿತ್ತು, ನಡೆದು ಹೋಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಪಾರ್ಕ್ ಒಳಗಡೆ ಯಾರಿಗೂ ಪ್ರವೇಶ ನೀಡದಂತೆ ಸೂಚನೆ ನೀಡಲಾಗಿದೆ. ಪಾರ್ಕ್ ಗಳ ಅಭಿವೃದ್ಧಿಗೆ ಈಗಾಗಲೇ ಬಜೆಟ್ ನಲ್ಲಿ ಇಂತಿಷ್ಟು ಹಣವೆಂದು ಕಾಯ್ದಿರಿಸಿದ್ದೇವೆ ಎಂದು ಮೇಯರ್ ಹೇಳಿದ್ದಾರೆ.

ಮೃತನ ತಾಯಿ ಕಣ್ಣೀರು:
ಭಾನುವಾರ ರಜಾ ದಿನವಾದ್ದರಿಂದ ಮಗ ಪಾರ್ಕ್‍ಗೆ ಆಟವಾಡಲು ಹೋಗಿದ್ದನು. ಆದ್ರೆ ಮತ್ತೆ ಮರಳಿ ಮನೆಗೆ ಬರಲೇ ಇಲ್ಲ. ಕರೆಂಟ್ ಶಾಕ್ ಗೆ ಬಲಿಯಾಗಿದ್ದಾನೆ. ಕಾಲಿಗೆ ಕರೆಂಟ್ ಶಾಕ್ ಹೊಡೆದಿದೆ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅವನು ಬದುಕುಳಿಯಲಿಲ್ಲ ಎಂದು ಮೃತ ಉದಯ್ ಕುಮಾರ್ ತಾಯಿ ಕಣ್ಣೀರು ಹಾಕಿದ್ದಾರೆ.

ಬಿಬಿಎಂಪಿಯವರು 10 ಲಕ್ಷ ಕೊಡುತ್ತೇವೆ ಅಂದಿದ್ದಾರೆ. ಆದ್ರೆ 10 ಲಕ್ಷ ಅಲ್ಲ 1 ಕೋಟಿ ರೂ. ಕೊಟ್ಟರೂ ನನ್ನ ಮಗುವನ್ನು ವಾಪಸ್ ತಂದು ಕೊಡಲ್ವಲ್ಲ. ಎಷ್ಟು ಅಜಾಗರೂಕತೆ ಇದೆ. ಆ ಪಾರ್ಕ್ ನಲ್ಲಿ ಮಕ್ಕಳು, ದೊಡ್ಡವರು ಎಲ್ಲರೂ ಓಡಾಡುತ್ತಾರೆ. ಎಷ್ಟು ಜನರ ಪ್ರಾಣಕ್ಕೆ ಅಪಾಯವಿದೆ. ಈವಾಗ ಹಲವರ ಪ್ರಾಣ ಉಳಿಸಿ ನನ್ನ ಮಗ ಪ್ರಾಣ ಕಳೆದುಕೊಂಡಿದ್ದಾನೆ. ಒಟ್ಟಿನಲ್ಲಿ ನನ್ನ ಮಗನಂತೆ ಇನ್ಯಾರಿಗೂ ಆಗದಂತೆ ಕ್ರಮ ಕೈಗೊಳ್ಳಲಿ ಎಂದು ಅವರು ತಿಳಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *