– ಕಾಲೇಜಿನವರೇ ಕೊಲೆ ಮಾಡಿ, ಆತ್ಮಹತ್ಯೆಯ ಕಥೆ ಸೃಷ್ಠಿಸಿರೋ ಆರೋಪ
– ಕತ್ತು, ದೇಹದ ಭಾಗದಲ್ಲಿ ರಕ್ತದ ಗಾಯ ಪತ್ತೆ
ಬೀದರ್/ಗದಗ: ಖಾಸಗಿ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯೋರ್ವನ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮುಂಡರಗಿ (Mundaragi) ಪಟ್ಟಣದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಬೀದರ್ (Bidar) ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ದನ್ನೂರಾ ಗ್ರಾಮದ ಈಶ್ವರ ಗಾದಗೆ (21) ಎಂದು ಗುರುತಿಸಲಾಗಿದೆ. ಅದೇ ಕಾಲೇಜಿನಲ್ಲಿ ಬಿಎಎಮ್‌ಎಸ್ ಅಂತಿಮ ವರ್ಷದಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಖ್ಯಾತ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ – 6 ಆರೋಪಿಗಳಿಗೆ 20 ವರ್ಷ ಜೈಲು
ಈ ಕುರಿತು ಮೃತನ ಕುಟುಂಬಸ್ಥರು ಕಾಲೇಜಿನ ವಿರುದ್ಧ ದೂರು ದಾಖಲಿಸಿದ್ದಾರೆ. ಕಾಲೇಜಿನವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ. ಜೊತೆಗೆ ಕಾಲೇಜು ಆಡಳಿತ ಮಂಡಳಿ ಪೊಲೀಸ್ ಇಲಾಖೆ ಹಾಗೂ ಕುಟುಂಬಕ್ಕೆ ಮಾಹಿತಿ ನೀಡದೇ ಆಸ್ಪತ್ರೆಗೆ ಶವ ಸಾಗಾಟ ಮಾಡಿದ್ದಾರೆ. ಇನ್ನೂ ವಿದ್ಯಾರ್ಥಿಗೆ ಕಳೆದ 6 ತಿಂಗಳ ಹಿಂದೆ ಕಾಲೇಜು ಉಪನ್ಯಾಸಕನೋರ್ವ ಕಿರುಕುಳ ನೀಡುತ್ತಿದ್ದ. ವಿದ್ಯಾರ್ಥಿ ಕಾಲಿನ ಬೆರಳಿನ ಉಗುರು ಕಿತ್ತಿವೆ. ಜೊತೆಗೆ ಕತ್ತು, ದೇಹದ ಭಾಗದಲ್ಲಿ ರಕ್ತದ ಗಾಯವಾಗಿದೆ. ಕಾಲೇಜಿನವರೇ ಕೊಲೆ ಮಾಡಿ, ತಾನೇ ಆತ್ಮಹತ್ಯೆ ಮಾಡಿಕೊಂಡಿರುವ ಕಥೆ ಸೃಷ್ಠಿ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಡೆತ್‌ನೋಟ್ ಪತ್ತೆಯಾಗಿದ್ದು, ಅಪ್ಪ, ಅಮ್ಮಾ ಕ್ಷಮಿಸಿ, ನಿಮಗೆ ನೋವು ನೀಡಬೇಕು ಎನ್ನುವುದು ನನ್ನ ಉದ್ದೇಶವಲ್ಲ. ಆದರೆ ನನಗೆ ಇದೆಲ್ಲ ಸಹಿಸೋಕೆ ಆಗುತ್ತಿಲ್ಲ ಎಂದು ಮೃತ ವಿದ್ಯಾರ್ಥಿ ಬರೆದಿದ್ದಾನೆ.
ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಗ್ರಾಮದಲ್ಲಿ ಯುವಕನ ಅಂತ್ಯಕ್ರಿಯೆ ನೆರವೇರಿದೆ.ಇದನ್ನೂ ಓದಿ: 2027ರ ಜನಗಣತಿಗೆ 11,718 ಕೋಟಿ ಬಿಡುಗಡೆಗೆ ಕೇಂದ್ರ ಅಸ್ತು – 2 ಹಂತಗಳಲ್ಲಿ ಸೆನ್ಸಸ್

