ರೆಡ್ಡಿ ಸಂಪ್ರದಾಯದ ಪ್ರಕಾರ ಹೂಳಬೇಕು, ರಾಜಶೇಖರ್‌ ದೇಹವನ್ನು ಸುಟ್ಟಿದ್ದು ಯಾಕೆ: ಶ್ರೀರಾಮುಲು ಪ್ರಶ್ನೆ

3 Min Read

– ಮೃತದೇಹದಲ್ಲಿ 5 ಬುಲೆಟ್‌ ಇತ್ತು
– ಕುಟುಂಬಸ್ಥರನ್ನು ಬೆದರಿಸಿ ಸುಟ್ಟು ಹಾಕಿದ್ದಾರೆ

ಬಳ್ಳಾರಿ: ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ (Rajasekhar) ಅಂತ್ಯ ಸಂಸ್ಕಾರದ ಬಗ್ಗೆ ಇದೀಗ ಮಾಜಿ ಸಚಿವ ಶ್ರೀರಾಮುಲು (Sriramulu) ಗಂಭೀರ ಆರೋಪ ಮಾಡಿದ್ದಾರೆ. ಸಾಕ್ಷ್ಯ ನಾಶಕ್ಕಾಗಿ ರಾಜಶೇಖರ ಮೃತದೇಹ ಸುಟ್ಟು ಹಾಕಿದ್ದಾರೆ ಎಂದಿರುವ  ಶ್ರೀರಾಮುಲು ಹೆಚ್ಚುವರಿ ಎಸ್‌ಪಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.

ಜನವರಿ 1ರಂದು ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಜನಾರ್ದನರೆಡ್ಡಿ (Janardhana Reddy) ಮನೆ ಮುಂದೆ, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಗಲಭೆ ನಡೆದಿತ್ತು. ಗಲಭೆಯಲ್ಲಿ ಕಾಂಗ್ರೆಸ್ ಶಾಸಕ ನಾರಾ ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್ ಗನ್‌ನಿಂದ ಹಾರಿದ ಬುಲೆಟ್ ಬಿದ್ದು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಸ್ಥಳದಲ್ಲೇ ಮೃತಪಟ್ಟಿದ್ದ.

ಮೃತಪಟ್ಟ ರಾಜಶೇಖರನ ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಸಂಸ್ಕಾರದ ಬಗ್ಗೆ ಇದೀಗ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ರಾಜಶೇಖರ ಅಂತ್ಯಸಂಸ್ಕಾರ ಮಾಡಲು ಆರಂಭದಲ್ಲಿ ಗುಂಡಿ ತೋಡಿ ಮುಚ್ಚಿದ್ದಾರೆ. ಕೊನೆಗೆ ರಾಜಶೇಖರನ ಮೃತದೇಹವನ್ನ ಸುಟ್ಟು ಹಾಕಿದ್ದಾರೆ. ಅಡಿಷನಲ್ ಎಸ್‌ಪಿ ರವಿಕುಮಾರ್ (SP Ravikumar) ಸೇರಿದಂತೆ ಪೊಲೀಸರು ಅವರ ಕುಟುಂಬಸ್ಥರನ್ನ ಹೆದರಿಸಿ, ಬೆದರಿಸಿ ಮೃತದೇಹ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದರು.

ರಾಜಶೇಖರ ದೇಹ ಹೊಕ್ಕಿದ್ದು ಐದು ಬುಲೆಟ್. ಇನ್ನೂ ಆತನ ದೇಹದಲ್ಲಿ ಬುಲೆಟ್‌ಗಳಿದ್ದವು. ಅದು ಹೊರಗೆ ಬರಬಾರದು ಎಂದು ಸುಟ್ಟು ಹಾಕಿದ್ದಾರೆ. ರೆಡ್ಡಿ ಸಂಪ್ರದಾಯದ ಭೂಮಿಯಲ್ಲಿ ಶವವನ್ನು ಹೂಳುತ್ತಾರೆ. ಆದರೆ ಇಲ್ಲಿ ರಾಜಶೇಖರನ ಶವವನ್ನು ಸುಟ್ಟು ಹಾಕಿದ್ದು ಯಾಕೆ? ಮತ್ತೆ ಪರೀಕ್ಷೆ ಮಾಡಬಾರದು ಎಂಬ ಕಾರಣಕ್ಕೆ ಸುಟ್ಟು ಹಾಕಿದ್ದಾರೆ. ಇವತ್ತಲ್ಲ ನಾಳೆ ಸತ್ಯ ಹೊರಗೆ ಬಂದೇ ಬರುತ್ತದೆ ಎಂದು ಶ್ರೀರಾಮುಲು ಗುಡುಗಿದರು.  ಇದನ್ನೂ ಓದಿ: ಬ್ಯಾನರ್ ಗಲಾಟೆ | ಮೃತ `ಕೈ’ ಕಾರ್ಯಕರ್ತನ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ – ಸಚಿವ ಜಮೀರ್ ವಿರುದ್ಧ ಐಟಿಗೆ ದೂರು

ಎಸ್‌ಪಿ ಪವನ್ ನೆಜ್ಜೂರ್ ಅಮಾನತು ಮಾಡಿರುವ ಬಗ್ಗೆ ರಾಮುಲು ಆಕ್ಷೇಪ ವ್ಯಕ್ತಪಡಿಸಿದದ್ದಾರೆ. ಗಲಾಟೆ ನಡೆದ ದಿನ ಜನಾರ್ದನ ರೆಡ್ಡಿ ಅವರು ಗಂಗಾವತಿಯಿಂದ ಬರುತ್ತಿದ್ದರು. ನಾನು ಮನೆಯಲ್ಲಿದ್ದೆ. ಆಗ ಸಮಯ 7: 15 ಆಗಿತ್ತು. ಜನಾರ್ದನ ರೆಡ್ಡಿ ಅವರು ಬಂದ ಕೂಡಲೇ ಅವರ ಮೇಲೆ ಮುಗಿಬಿದ್ದರು. ಪೊಲೀಸರು ಇಬ್ಬರು- ಮೂವರು ಮಾತ್ರ ಇದ್ದರು. ನೂಕುನುಗ್ಗಲು ಆದಾಗ ಅವರ ಗನ್ ಮ್ಯಾನ್‌ಗಳು ಫೈರಿಂಗ್ ಶುರು ಮಾಡಿದ್ದರು. ಸಾಕಷ್ಟು ಗುಂಡು ಹಾರಿದರೂ ದೇವರ ಆಶೀರ್ವಾದದಿಂದ ಏನೂ ಆಗಿಲ್ಲ. ಎಸ್‌ಪಿ ಅವರು ಅವತ್ತು ಬೆಳಗ್ಗೆ ಅಧಿಕಾರ ಸ್ವೀಕರಿಸಿದ್ದರು. 9 ಗಂಟೆಗೆ ಅಡಿಷನಲ್ ಎಸ್ಪಿ ತಿಳಿಸಿದ್ದಾರೆ. ಅಲ್ಲಿತನಕ ಯಾವುದೇ ಮಾಹಿತಿ ಇರಲಿಲ್ಲ. ಅಡಿಷನಲ್ ಎಸ್‌ಪಿ ರವಿಕುಮಾರ್‌ಗೆ ಎಲ್ಲಾ ಗೊತ್ತಿದ್ರೂ ಯಾವುದನ್ನೂ ಸೀರಿಯಸ್ಸಾಗಿ ತಗೊಂಡಿಲ್ಲ. ಟೀಯರ್ ಗ್ಯಾಸ್ ಸಿಡಿಸುವಾಗ ಡಿಆರ್‌ನವರು ಅಡಿಷನಲ್ ಎಸ್‌ಪಿ  ಅವರಲ್ಲಿ ಕೇಳಿದ್ದಾರೆ. ಆಗ ರವಿಕುಮಾರ್ ತಡೆದಿದ್ದಾರೆ. ಆಕಸ್ಮಾತ್ ಆರಂಭದಲ್ಲೇ ಪೊಲೀಸರು ಟೀಯರ್ ಗ್ಯಾಸ್ ಸಿಡಿಸಿದ್ದರೆ  ಇಷ್ಟೊಂದು ದೊಡ್ಡ ಗಲಾಟೆ ಆಗ್ತಿರಲಿಲ್ಲ. ಹೀಗಾಗಿ ಪವನ್ ನಿಜ್ಜೂರ್ ಸಸ್ಪೆಂಡ್ ಬದಲು ರವಿಕುಮಾರ್ ಸಸ್ಪೆಂಡ್ ಆಗಬೇಕು ಎಂದು ಶ್ರೀರಾಮುಲು ಆಗ್ರಹಿಸಿದರು.

ಘಟನೆಗೆ ಸಂಬಂಧಿಸಿದಂತೆ ನನ್ನ ಮೇಲೆ ಕೊಲೆ ಕೇಸ್ ಹಾಕಿದ್ದಾರೆ. ಯಾವ್ಯಾವ ಕೇಸ್ ಹಾಕಬೇಕು ಎಂದು ಐಜಿ ಅವರು ಶಾಸಕರ ಬಳಿ ಕೇಳುತ್ತಾರೆ. ಏನೆಲ್ಲಾ ಅನಾಹುತ ಆಗಿದ್ದರೂ ಐಜಿ ಕ್ರಮ ತಗೊಂಡಿಲ್ಲ. ರಾಮುಲು, ಜನಾರ್ದನ ರೆಡ್ಡಿ ಅವರನ್ನ ಹೆದರಿಸಬೇಕು ಎಂದು 302 ಕೇಸ್ ಹಾಕಿದ್ದಾರೆ. ಗಲಾಟೆ ಆದ ಕೂಡಲೇ ನಾನು ಡಿಕೆಶಿ ಅವರಿಗೆ ಕಾಲ್ ಮಾಡಿದ್ದೆ. ನಮ್ಮ ಕೈಯಲ್ಲಿ ಇಲ್ಲ, ನಮ್ಮ ಶಕ್ತಿ ಮೀರುತ್ತಿದೆ, ಗಲಾಟೆ ತಡೆಯಲು ನಮ್ಮ ಬಳಿ ಶಕ್ತಿ ಇಲ್ಲ ಎಂದು ಹೇಳಿದ್ದರು ಅವರು ಅದನ್ನ ಒಪ್ಪಿಕೊಂಡಿದ್ದಾರೆ. ರಾಜಕಾರಣ, ಪಕ್ಷ ಹೊರತುಪಡಿಸಿ ಅವರು ನನ್ನ ಸ್ನೇಹಿತರು. ಅವರಿಗೆ ನಮ್ಮನ್ನು ರಕ್ಷಣೆ ಮಾಡಿ ಎಂದು ಹೇಳಿದ್ದೆ. ಅನೇಕ ಸಚಿವರಿಗೆ ನಾನು ಮಾತನಾಡಿ ನನ್ನ ಶಕ್ತಿ ನನಗೆ ಸಾಲುತ್ತಿಲ್ಲ. ನನ್ನನ್ನು ಹಾಗೂ ಜನಾರ್ದನ ರೆಡ್ಡಿ ಅವರನ್ನು ರಕ್ಷಣೆ ಮಾಡಿ ಎಂದು ಕೇಳಿದ್ದೆ ಎಂದರು.

ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿದ್ದು ಮಾಡಿದ್ದು ಸರಿಯಲ್ಲ. ಇದೀಗ ಪವನ್ ನಿಜ್ಜೂರ್ ಎಲ್ಲಿದ್ದಾರೆ? ಅವರು ಇದ್ದಾರೋ, ಇಲ್ವೋ ಅನ್ನೋದನ್ನು ಈ ನಾಡಿನ ಜನರಿಗೆ ತಿಳಿಸಬೇಕು. ಈ ಕಾಂಗ್ರೆಸ್ ಸರ್ಕಾರದಲ್ಲಿ ಬರೀ ಕೊಲೆಗಳಾಗ್ತವೆ. ಅಧಿಕಾರಿಗಳ ಸಾವಾಗ್ತವೆ. ಇದೊಂದು ಕೊಲೆಗಡುಕ ಸರ್ಕಾರ ಎಂದು ತೀವ್ರ ವಾಗ್ದಾಳಿ ನಡೆಸಿದರು.

Share This Article