– ಜನಾರ್ದನ ರೆಡ್ಡಿ, ಭರತ್ ರೆಡ್ಡಿ ಮೇಲೂ ಕೇಸ್ – 40ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ಬಳ್ಳಾರಿ: ರಾಜಕಾರಣಿಗಳ ಜಟಾಪಟಿಯಲ್ಲಿ ಬಡವರ ಮಕ್ಕಳು ಬಲಿಯಾಗ್ತಾರೆ ಅನ್ನೋದಕ್ಕೆ ಬಳ್ಳಾರಿ ಬ್ಯಾನರ್ ಗಲಾಟೆ (Ballari Banner Clash) ತಾಜಾ ನಿದರ್ಶನ. ಕಾಂಗ್ರೆಸ್ ಕಾರ್ಯಕರ್ತ (Congress Worker) ರಾಜಶೇಖರ್ ಗುಂಡೇಟಿಗೆ ಬಲಿಯಾಗಿದ್ದಾನೆ.
ಮೃತ ರಾಜಶೇಖರ್ ನಿವಾಸಕ್ಕೆ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಇಂದು ಭೇಟಿ ನೀಡಿ, ಸಾಂತ್ವನ ಹೇಳಿದರು. ಜಮೀರ್, ಶಾಸಕ ಭರತ್ ರೆಡ್ಡಿ, ಕಂಪ್ಲಿ ಗಣೇಶ್ ಒಟ್ಟಿಗೆ ಸೇರಿ ವೈಯಕ್ತಿಕವಾಗಿ 25 ಲಕ್ಷ ನಗದು ಪರಿಹಾರ ನೀಡಿದರು. ಅಲ್ಲದೆ, ಸ್ಲಂ ಬೋರ್ಡ್ ಕಡೆಯಿಂದ ಮನೆ ಕಟ್ಟಿಸಿಕೊಡ್ತೇವೆ. ರಾಜಶೇಖರ್ ಅಣ್ಣನಿಗೆ ಕೆಲಸ ಕೊಡಿಸುವುದಾಗಿ ಜಮೀರ್ ಭರವಸೆ ಕೊಟ್ಟಿದ್ದಾರೆ. ಬಡಕುಟುಂಬದಲ್ಲಿ ಬೆಳೆದಿದ್ದ ರಾಜಶೇಖರ್ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ. ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಮನೆಗೂ ಒಳ್ಳೆ ಮಗನಾಗಿದ್ದ ಎಂದು ತಾಯಿ ತುಳಿಸಿ ಭಾವುಕರಾಗಿದ್ದಾರೆ.
ಬುಲೆಟ್ ರಹಸ್ಯ ಪತ್ತೆ
ಮೃತ ರಾಜಶೇಖರ್ ದೇಹ ಹೊಕ್ಕಿದ್ದು 12 ಎಂಎಂ ಸಿಂಗಲ್‌ಬೋರ್ ಗುಂಡು ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 21 ಪೆಲೆಟ್ಸ್‌ಗಳು ಜಶೇಖರ್‌ನ ಮೃತದೇಹ ಹೊಕ್ಕಿದೆ. ಇದರಿಂದ ಶ್ವಾಸಕೋಶ, ಲಿವರ್ ಡ್ಯಾಮೇಜ್ ಆಗಿ, ಸ್ಥಳದಲ್ಲೇ ಆತ ಸಾವನ್ನಪ್ಪಿದ್ದ. ಇದೀಗ 12 ಎಂಎಂ ಸಿಂಗಲ್‌ಬೋರ್ ಗುಂಡು ಯಾವ ಗನ್‌ನಿಂದ ಬಂದಿದೆ..? ಜನಾರ್ದನರೆಡ್ಡಿ ಕಡೆಯವರದ್ದಾ…? ಭರತ್ ರೆಡ್ಡಿ ಕಡೆಯವರದ್ದಾ..? ಎಂಬುದರ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಂತಿದೆ. ತನಿಖಾಧಿಕಾರಿಗಳು ಬಹುತೇಕ ಅಂತಿಮ ನಿರ್ಣಯಕ್ಕೆ ಬಂದಿದ್ದು, ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದಾರೆ.
ಇನ್ನು, ಹುಸೇನ್ ನಗರದಲ್ಲಿರುವ ಮನೆಯಲ್ಲಿ ನೀರವ ಮೌನ ಆವರಿಸಿದೆ. ಮಗನ ಸಾವಿನಿಂದ ತಾಯಿಯಂತೂ ಅಕ್ಷರಶಃ ಕುಗ್ಗಿ ಹೋಗಿದ್ದಾರೆ. ಸಹೋದರ ರಾಜಶೇಖರ್‌ನನ್ನು ನೆನೆದು ಅಕ್ಕ ಉಮಾ ಬಿಕ್ಕಿ-ಬಿಕ್ಕಿ ಅಳುತ್ತಿದ್ದಾರೆ. ಅವನು ಇಲ್ಲ ಎಂಬುದನ್ನು ನಂಬುವುದಕ್ಕೆ ಆಗುತ್ತಿಲ್ಲ. ಮನೆಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ನಾವು ಅನಾಥರಾಗಿದ್ದೇವೆ ಎಂದು ಕಣ್ಣಿರಿಟ್ಟಿದ್ದಾರೆ. ಸೋಮವಾರವಷ್ಟೇ ಶಬರಿಮಲೆಗೆ ಹೋಗಿ ಬಂದಿದ್ದ ರಾಜಶೇಖರ್, ಪ್ರಸಾದ ತಂದಿದ್ದೇನೆ ಬಾ ಅಕ್ಕ ಅಂತ ಕರೆದಿದ್ದ. ಆದ್ರೀಗ ಶವ ಆಗಿದ್ದಾನೆ ಅಂತ ಕಣ್ಣೀರಿಟ್ಟಿದ್ದಾರೆ.
ಜನಾರ್ದನ ರೆಡ್ಡಿ, ಭರತ್ ರೆಡ್ಡಿ ಮೇಲೂ ಕೇಸ್
ಬಳ್ಳಾರಿಯಲ್ಲಿ ವಾಲ್ಮೀಕಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆ ಸಂಬಂಧ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಸಮ್ಮುಖದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ಕಾರ್ಯಕರ್ತ ನಾಗರಾಜ್ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶಾಸಕ ಜನಾರ್ದನ ರೆಡ್ಡಿ ಹಲ್ಲೆ ಹಾಗೂ ಕೊಲೆ ಯತ್ನ ಆರೋಪದ ಮೇಲೆ ದೂರು ನೀಡಿದ್ದರೆ, ನಾಗರಾಜ್ ಅಕ್ರಮ ಪ್ರವೇಶ, ಜಾತಿ ನಿಂದನೆ, ಕೊಲೆ ಯತ್ನ ಹಾಗೂ ಗಲಾಟೆ ಆರೋಪದ ದೂರು ಕೊಟ್ಟಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಉಭಯ ನಾಯಕರ ಮೇಲೆ ಕೇಸ್ ದಾಖಲಾಗಿದೆ. ಜನಾರ್ದನ ರೆಡ್ಡಿ ವಿರುದ್ದ 4 ದೂರು, ನಾರಾ ಭರತ್ ರೆಡ್ಡಿ ವಿರುದ್ಧವಾಗಿ 2 ಕೇಸ್ ದಾಖಲಾಗಿದೆ.
20ಕ್ಕೂ ಹೆಚ್ಚು ವಿಡಿಯೋ ಪರಿಶೀಲನೆ
ತನಿಖೆಗಿಳಿದಿರುವ ಪೊಲೀಸರು ಘಟನಾ ಸ್ಥಳದಲ್ಲಿ ಸಿಕ್ಕ ಗಾಜು, ಕಲ್ಲು, ಕಾರದಪುಡಿ ಹಾಗೂ ಇಟ್ಟಿಗೆಗಳು ಸೇರಿ ಇತರೆ ವಸ್ತುಗಳ ಸ್ಯಾಂಪಲ್ ಕಲೆ ಹಾಕಿದ್ದಾರೆ. 20ಕ್ಕೂ ಹೆಚ್ಚು ವಿಡಿಯೋ ಆಧರಿಸಿ, ಈವರೆಗೆ ಒಟ್ಟು 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಉಳಿದವರ ಪತ್ತೆಗೆ ಪೊಲೀಸರು ತಲಾಶ್ ಮುಂದುವರಿಸಿದ್ದಾರೆ. 7 ಜನ ಖಾಸಗಿ ಗನ್ ಮ್ಯಾನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನಾರ್ದನ ರೆಡ್ಡಿ ಮನೆ ಬಳಿ ಡಿಐಜಿ ವರ್ತಿಕಾ ಕಟೀಯಾರ್ ಪರಿಶೀಲನೆ ನಡೆಸಿದ್ದಾರೆ.
ಇನ್ನು, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಶಾಸಕ ಭರತ್ ರೆಡ್ಡಿ ಆಗಮಿಸಿದ್ರು. ಶಾಸಕ ಜನಾರ್ದನ ರೆಡ್ಡಿ ಮನೆ ಹತ್ತಿರದ ಘಟನಾ ಸ್ಥಳಕ್ಕೆ ಭರತ್ ರೆಡ್ಡಿ ಹೋಗದಂತೆ ಕೌಲ್ ಬಜಾರ್ ಠಾಣೆಯ ಸಿಪಿಐ ಸುಭಾಶ್ ತಡೆಯುವ ಪ್ರಯತ್ನ ಮಾಡಿದ್ದರು. ಆದರೆ, ಭರತ್‌ರೆಡ್ಡಿ, ಗನ್ ಮ್ಯಾನ್ ಇಬ್ಬರೂ ಸಿಪಿಐನ ತಳ್ಳಿಕೊಂಡೇ ಹೋಗಿದ್ದಾರೆ.
ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಗಲಭೆಗೂ ಮುನ್ನ ಭರತ್ ರೆಡ್ಡಿ ದುರ್ಗಮ್ಮ ಗುಡಿ ಹತ್ತಿರ ಜನ ಸೇರಿಸಿದ್ರು. ಆಗ ಡಿವೈಎಸ್‌ಪಿ ನಂದಾರೆಡ್ಡಿ ಭರತ್ ರೆಡ್ಡಿ ಜೊತೆನೆ ಬರ್ತಾರೆ, ಡಿವೈಎಸ್‌ಪಿ ಕುಮ್ಮಕ್ಕಿನಿಂದ ಘಟನೆ ನಡೆದಿದೆ. ಕೂಡಲೇ ಡಿವೈಎಸ್‌ಪಿ ನಂದಾರೆಡ್ಡಿಯನ್ನು ಅಮಾನತು ಮಾಡಿ ಅಂತ ಆಗ್ರಹಿಸಿದ್ದಾರೆ. ಅಲ್ಲದೆ, ಪಬ್ಲಿಕ್‌ಟಿವಿ ಜೊತೆ ಮಾತಾಡಿ, ನನ್ನ ತುಳಿದು ಭರತ್ ರೆಡ್ಡಿ ಹೀರೋ ಆಗಲು ಹೊರಟಿದ್ದಾನೆ. ಆತನ ಆಪ್ತ ಸತೀಶ್ ರೆಡ್ಡಿ ಗನ್‌ಮ್ಯಾನ್‌ಗಳೇ ನಮ್ಮ ಮನೆ ಮೇಲೆ ಫೈರಿಂಗ್ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಈ ಮಧ್ಯೆ, ಭರತ್ ರೆಡ್ಡಿ ಮಾತಾಡಿ, ಬಳ್ಳಾರಿ ಶಾಂತವಾಗಿರಬೇಕು ಅಂತ ಬಯಸುವವನು ನಾನು ಅಂದಿದ್ದಾರೆ. ಈ ಮಧ್ಯೆ, ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿ ಘಟನಾ ಸ್ಥಳಕ್ಕೆ ಭೇಟಿ ನೀಡಿತ್ತು.


