ಬಾಲಕೋಟ್ ಜೈಷ್ ಉಗ್ರರ ಬೋರ್ಡಿಂಗ್ ಸ್ಕೂಲ್ – ಭಾರತದ ವಿಮಾನಗಳನ್ನು ನೋಡಿ ಪಾಕ್ ಕನ್‍ಫ್ಯೂಸ್

Public TV
3 Min Read

ನವದೆಹಲಿ: ಭಾರತೀಯ ವಾಯುಸೇನೆ ಮಂಗಳವಾರ ಬೆಳಗ್ಗೆ ಪಾಕಿನಲ್ಲಿ ಅಡಗಿದ್ದ ಉಗ್ರರಿಗೆ ಶಾಕ್ ನೀಡಿದೆ. ರಾತ್ರಿ ವೇಳೆ ನಿದ್ರಿಸುತ್ತಿದ್ದ ಉಗ್ರರ ಮೇಲೆ ಬಾಂಬ್ ದಾಳಿ ನಡೆಸಿ ಅಡಗುತಾಣವನ್ನೇ ನೆಲಸಮ ಮಾಡಿದೆ.

ನಮ್ಮ ಹೆಮ್ಮೆಯ ವಾಯುಪಡೆಯ ಯೋಧರು ದಾಳಿ ಮಾಡಿದ್ದ ಬಾಲಕೋಟ್ ಉಗ್ರರ ನೆಲೆ ಅಂತಿಂಥ ನೆಲೆಯಲ್ಲ. ಅದು ಉಗ್ರರ ಬೋರ್ಡಿಂಗ್ ಸ್ಕೂಲ್ ಆಗಿತ್ತು. ಯುವಕರ ತಲೆಕೆಡಿಸಿ ಉಗ್ರರನ್ನಾಗಿ ರೂಪಿಸಿ ಭಾರತ ಮೇಲೆ ವಿಷಬಿಜ ಬಿತ್ತುತ್ತಿದ್ದ ಪ್ರಧಾನ ಕೇಂದ್ರ ಸ್ಥಳವೇ ಬಾಲಕೋಟ್. ಇದನ್ನೂ ಓದಿ:ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ

ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲಿದೆ ಎನ್ನುವುದನ್ನು ಅರಿತ ನೂರಾರು ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದಿಂದ ಅರಣ್ಯ ಪ್ರದೇಶದ ಬೆಟ್ಟದ ತುದಿಯಲ್ಲಿ ರೆಸಾರ್ಟ್ ನಂತಿರುವ ಬಾಲಕೋಟ್ ನೆಲೆಗೆ ಸ್ಥಳಾಂತರಗೊಂಡಿದ್ದರು.

5 ಸ್ಟಾರ್ ಹೋಟೆಲ್ ನಂತಿರುವ ಈ ನೆಲೆ ಸುರಕ್ಷಿತ ಎಂದು ಭಾವಿಸಿ ಉಗ್ರರು ಈ ನೆಲೆಯಲ್ಲಿ ಆಶ್ರಯ ಪಡೆದಿದ್ದರು. ಈ ಕ್ಯಾಂಪ್ ನಲ್ಲಿ ಸುಮಾರು 300ಕ್ಕೂ ಹೆಚ್ಚು ಉಗ್ರರು ಹಾಗೂ 25 ರಿಂದ 27 ಮಂದಿ ತರಬೇತುದಾರರು ತಂಗಿದ್ದರು ಎಂದು ಮೂಲಗಳು ತಿಳಿಸಿವೆ.

ಬಾಲಕೋಟ್ ಕ್ಯಾಂಪ್ ನೆಲದ ಮೆಟ್ಟಿಲುಗಳಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತು ಇಸ್ರೇಲ್ ಧ್ವಜಗಳನ್ನು ಬಿಡಿಸಲಾಗಿತ್ತು. ಈ ತರಬೇತಿ ಶಿಬಿರ ಬಾಲಕೋಟ್ ಸಮೀಪದ ಕಾಡಿನಲ್ಲಿ ಆರು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿತ್ತು. ಈ ಶಿಬಿರದಲ್ಲಿ 600ಕ್ಕೂ ಹೆಚ್ಚು ಮಂದಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಇದನ್ನೂ ಓದಿ:ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

ದೊಡ್ಡ ದೊಡ್ಡ ಕೊಠಡಿಗಳು, ಈಜುಕೊಳ, ಜಿಮ್ ಸೆಂಟರ್‍ಗಳನ್ನು ಇಲ್ಲಿ ನಿರ್ಮಾಣಗೊಂಡಿದೆ. ತರಬೇತಿ ನೀಡಿದ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಇಲ್ಲೇ ನೀಡಲಾಗುತಿತ್ತು. ಜೈಷ್ ಸಂಘಟನೆಯ ಮದ್ದುಗುಂಡುಗಳ ಸಂಗ್ರಹಾಲಯ ಇದಾಗಿತ್ತು. ಅರಣ್ಯ ಪ್ರದೇಶದಲ್ಲಿ ಉಗ್ರರಿಗೆ ಶೂಟಿಂಗ್ ತರಬೇತಿ ನೀಡಲಾಗುತಿತ್ತು.

ಬಾಲಕೋಟ್ ಮುಖ್ಯನಗರದಿಂದ 20 ಕಿ.ಮೀ ದೂರದಲ್ಲಿರುವ ಜೈಷ್ ಉಗ್ರರ ಕೇಂದ್ರ ಸ್ಥಳ ಭಾರತದ ಗಡಿ ನಿಯಂತ್ರಣ ರೇಖೆಯಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಅಮೆರಿಕದ ದಾಳಿಗೆ ಬಲಿಯಾಗಿದ್ದ ಅಲ್‍ಕೈದಾ ಸಂಘಟನೆಯ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಅಡಗಿದ್ದ ಅಬೋಟಾಬಾದ್ ನಗರ ಬಾಲಕೋಟ್‍ನಿಂದ 60 ಕಿ.ಮೀ ದೂರದಲ್ಲಿದೆ. ಇದನ್ನೂ ಓದಿ:ರಾತ್ರಿ ವಿಮಾನಗಳು ಹಾರಾಡುತ್ತಿದ್ದು, ಶಬ್ಧ ಕೇಳಿ ಭಯದಲ್ಲಿ ನಿದ್ದೆ ಬಂದಿಲ್ಲ- ಪ್ರತ್ಯಕ್ಷದರ್ಶಿ

ಭಾರತ ಸೇನೆ ಪ್ರತೀಕಾರವನ್ನು ತೀರಿಸಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಉಗ್ರರೆಲ್ಲರೂ ಬಾಲಕೋಟ್ ಅಡಗುದಾಣವನ್ನು ಸೇರಿದ್ದರು. ಭಾರತ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಾಧ್ಯವೇ ಇಲ್ಲ. ಒಂದು ವೇಳೆ ಭಾರತದ ಸೇನೆ ನುಗ್ಗಿದರೂ ಪಾಕ್ ಸೇನೆ ಹೊಡೆದು ಉರುಳಿಸಿ ನಮ್ಮನ್ನು ರಕ್ಷಿಸುತ್ತದೆ ಎಂದೇ ಉಗ್ರರು ಬಲವಾಗಿ ನಂಬಿದ್ದರು.

ಪಾಕ್ ಕನ್‍ಫ್ಯೂಸ್:
ದಾಳಿಯ ಬಗ್ಗೆ ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಭಾರತದ ಪಶ್ಚಿಮ ಮತ್ತು ಕೇಂದ್ರ ವಾಯುನೆಲೆಯಿಂದ ಒಂದೇ ಸಮಯಕ್ಕೆ ಒಂದೇ ಬಾರಿಗೆ ಹಲವು ವಿಮಾನಗಳು ಹಾರಾಟ ಆರಂಭಿಸಿದವು. ಈ ವಿಚಾರ ಪಾಕಿಸ್ತಾನ ಅಧಿಕಾರಿಗಳಿಗೆ ಗೊತ್ತಾಗಿ ಅವರು ತುಂಬಾ ಗೊಂದಲಕ್ಕೆ ಒಳಗಾಗಿದ್ದರು. ಒಂದೇ ಸಮಯದಲ್ಲಿ ಹಲವು ವಿಮಾನಗಳು ಟೇಕಾಫ್ ಆಗಿದ್ದರಿಂದ ಗಡಿ ನಿಯಂತ್ರಣ ರೇಖೆಯ ಬಳಿ ದಾಳಿ ನಡೆಸಬಹುದು. ಆದರೆ ಪಾಕಿಸ್ತಾನದ ನೆಲದ ಒಳಗಡೆ ವಿಮಾನ ಬರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಊಹಿಸಿದ್ದರು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಎಲ್ಲ ವಿಮಾನಗಳ ಜೊತೆ ಗುಂಪಿನಲ್ಲಿ ಬಂದಿದ್ದ ಮಿರಾಜ್ ಪಾಕಿಸ್ತಾನದ ರೇಡಾರ್‍ಗಳು ಕಣ್ಣು ತಪ್ಪಿಸಿ ಬಿಟ್ಟಿತು. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಭೂಪ್ರದೇಶ ಒಳಗಡೆ ನುಗ್ಗಿದ ಮಿರಾಜ್ ವಿಮಾನ ಯಾರೂ ನಿರೀಕ್ಷೆ ಮಾಡದಂತೆ ಪಾಕ್ ನೆಲಕ್ಕೆ ನುಗ್ಗಿ ಉಗ್ರರ ಅಡಗುದಾಣದ ಮೇಲೆಯೇ ಬಾಂಬ್ ದಾಳಿ ನಡೆಸಿ ಯಶಸ್ವಿಯಾಗಿ ದೇಶಕ್ಕೆ ಮರಳಿತ್ತು. ಈ ಮೂಲಕ ನೀವೇ ಎಲ್ಲೇ ಅಡಗಿದ್ದರೂ ನಾವು ಹೊಡೆಯಬಲ್ಲೆವು ಎಂದು ತೋರಿಸಿಕೊಟ್ಟಿತು. ಅಷ್ಟೇ ಅಲ್ಲದೇ ಸಾಕ್ಷ್ಯ ಕೇಳಿದ ಪಾಕಿಸ್ತಾನಕ್ಕೆ ಅವರ ನೆಲದಲ್ಲೇ ಉತ್ತರ ನೀಡಿ ಪುಲ್ವಾಮಾ ದಾಳಿ ಸೇಡು ತೀರಿಸಿಕೊಂಡಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *