ತ್ಯಾಗದ ಪ್ರತೀಕ ʻಬಕ್ರೀದ್‌ʼ

Public TV
2 Min Read

ಮುಸ್ಲಿಂ ಬಾಂಧವರು ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನ, ಅಚಲ ದೈವ ಭಕ್ತಿ ಹಾಗೂ ಅವರ ಪುತ್ರ ಹಜರತ್‌ ಇಸ್ಮಾಯಿಲ್‌ ಅವರ ದೈಬ ಭಕ್ತಿಯನ್ನು ಸಂಕೇತಿಸುವ ಹಬ್ಬವೇ ‘ಈದುಲ್ ಅದ್‌ಹಾʼ. ಭಾರತದಲ್ಲಿ ಈ ಹಬ್ಬವನ್ನು ಮುಸ್ಲಿಂ (Muslims) ಬಾಂಧವರ ಪವಿತ್ರ ಬಕ್ರೀದ್‌ (Bakrid Festival) ಎಂದು ಆಚರಿಸುತ್ತಾರೆ. ಈ ಬಾರಿ ಜೂನ್‌ 07 ರಂದು (ಇಂದು) ದೇಶದಾದ್ಯಂತ ಮುಸ್ಲಿಮರು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಪುಣ್ಯ ಸಂಪಾದಿರುವ ರಂಜಾನ್‌ (Ramdhan) ತಿಂಗಳ ಉಪವಾಸದ ಬಳಿಕ ‘ಈದ್‌ ಉಲ್‌ ಫಿತ್ರ್‌’ ಹಬ್ಬ ಆಚರಿಸುವುದಾದರೆ, ಇಸ್ಲಾಮಿಕ್ ಕ್ಯಾಲೆಂಡರಿನ ‘ದುಲ್ ಹಜ್’ ತಿಂಗಳ 10ರಂದು ಬಕ್ರೀದ್‌ ಆಚರಣೆ ನಡೆಯುತ್ತದೆ. 4 ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸುವುದು ‘ಬಕ್ರೀದ್‌’ನ ಮುಖ್ಯ ಆಶಯ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್ ಅವರಿಗಿಂತ ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದರು ಎಂದು ಮುಸ್ಲಿಂ ಬಾಂಧವರ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.

ramzan

ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳುವುದು, ಅಲ್ಲಾಹುವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಈ ದಿನ ಮಸೀದಿಗಳಲ್ಲಿ ಸಾಮೂಹಿಕ ಈದ್ ನಮಾಜ್ ಇರುತ್ತದೆ. ಮಕ್ಕಳು, ಹಿರಿಯರು ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವರು. ನಮಾಜ್‌ಗೂ ಮುನ್ನ ಕೆಲ ಹೊತ್ತು ‘ತಕ್ಷೀರ್’ ಮೊಳಗಿಸಲಾಗುತ್ತದೆ.

ಮನೆ ಮನೆಗಳಲ್ಲಿ ಹಬ್ಬದೂಟ:
ಮನೆಗಳಲ್ಲಿ ಹಬ್ಬದ ಊಟ, ವಿಶೇಷ ಖಾದ್ಯಗಳನ್ನು ತಯಾರಿಸುವರು. ಗೆಳೆಯರು, ಬಂಧುಗಳನ್ನು ಆಹ್ವಾನಿಸಿ ಜೊತೆಯಾಗಿ ಊಟ ಮಾಡಿ, ಸಂಭ್ರಮ ಹಂಚಿಕೊಳ್ಳುವರು. ಹಬ್ಬದ ದಿನ ದಾನವಾಗಿ ದೊರೆಯುವ ಮಾಂಸ, ಹಣ, ದಿನಸಿ ಸಾಮಗ್ರಿಗಳಿಂದ ಎಷ್ಟೋ ಬಡಕುಟುಂಬಗಳಿಗೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುತ್ತದೆ.

ಜಾನುವಾರು ಬಲಿ ನೀಡುವ ಆಚರಣೆ:
ಜಾನುವಾರುಗಳನ್ನು ಬಲಿ ಕೊಡುವುದು ಸಹ ‘ಬಕ್ರೀದ್‌’ನ ಪ್ರಮುಖ ಆಚರಣೆಯಾಗಿದೆ. ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದಿದ್ದ ಘಟನೆಯೊಂದರ ನೆನಪಿನಲ್ಲಿ ಜಾನುವಾರು ಬಲಿ ನೀಡಲಾಗುತ್ತದೆ. ಇದಕ್ಕೆ ಒಂದು ಹಿನ್ನೆಲೆಯೂ ಇದೆ.

Bakrid

ಅಲ್ಲಾಹುನ ಆದೇಶದಂತೆ ಇಬ್ರಾಹಿಂ, ತಮ್ಮ ಪುತ್ರ ಇಸ್ಮಾಯಿಲ್ ಅವರನ್ನು ಬಲಿಯರ್ಪಿಸಲು ಮುಂದಾಗುವರು. ತಮ್ಮ ಮಗನನ್ನೇ ಬಲಿ ನೀಡಲು ಸಿದ್ಧವಾಗಿದ್ದ ಇಬ್ರಾಹಿಂ ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ಟಗರನ್ನು ಬಲಿಯರ್ಪಿಸುವಂತೆ ಸೂಚಿಸುತ್ತಾರೆ. ಇದು ತಮ್ಮ ಧರ್ಮಗ್ರಂಥಗಳಲ್ಲೂ ಉಲ್ಲೇಖವಾಗಿದೆ ಎಂದು ಮುಸ್ಲಿಂ ಧರ್ಮಗುರುಗಳು ಹೇಳಿದ್ದಾರೆ.

ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸಲು ಹಬ್ಬದ ದಿನ ಜಾನುವಾರು ಬಲಿ ಅರ್ಪಿಸಲಾಗುತ್ತದೆ. ಆರ್ಥಿಕವಾಗಿ ಸಬಲರಾಗಿರುವ ಎಲ್ಲರೂ ಪ್ರಾಣಿಬಲಿ ನೀಡಬೇಕು. ಪ್ರಾಣಿಯಿಂದ ಲಭಿಸಿದ ಮಾಂಸವನ್ನು ಸಮನಾಗಿ ಮೂರು ಪಾಲು ಮಾಡಬೇಕು. ಅದರಲ್ಲಿ ಒಂದು ಭಾಗವನ್ನು ಸ್ವತಃ ಬಳಸಿಕೊಳ್ಳಬಹುದು. ಇನ್ನೆರಡು ಪಾಲುಗಳನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚಬೇಕು.

Bakrid

ಹಜ್ ಯಾತ್ರೆ:
ಸೌದಿ ಅರೇಬಿಯಾದ ಮಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುವ ಸಮಯದಲ್ಲೇ ಈ ಹಬ್ಬ ಆಚರಿಸಲಾಗುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್‌ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಬಕ್ರೀದ್ ಮುನ್ನಾದಿನ ಅಥವಾ ‘ದುಲ್ ಹಜ್’ ತಿಂಗಳ 9ರಂದು ಹಜ್ ಯಾತ್ರಿಕರು ಮಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಸೇರುತ್ತಾರೆ. ಈ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸವಿರುತ್ತಾರೆ. ಪುಣ್ಯ ಸಂಪಾದಿಸುವ ರಂಜಾನ್‌ ಮಾಸದಲ್ಲೂ ಮುಸ್ಲಿಂ ಬಾಂಧವರು ಮಕ್ಕಾ, ಮದೀನಕ್ಕೆ ಭೇಟಿ ನೀಡುತ್ತಾರೆ.

Share This Article