ಉಡುಪಿ: ಮುಸ್ಲಿಂ ಧರ್ಮೀಯರ ಪವಿತ್ರ ಬಕ್ರೀದ್ ಹಬ್ಬವನ್ನು ಉಡುಪಿಯಲ್ಲಿ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ದೇಶಾದ್ಯಂತ ನಾಳೆ ಬಕ್ರೀದ್ ಆಚರಿಸಲಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಇಂದು ಹಬ್ಬವನ್ನು ಆಚರಿಸಲಾಗುತ್ತಿದೆ.
ರಂಜಾನ್ ಸಂದರ್ಭ ಕರಾವಳಿ ರಾಜ್ಯಗಳಾದ ಕೇರಳ ಮತ್ತು ಕರ್ನಾಟಕದಲ್ಲೂ ಚಂದ್ರದರ್ಶನಕ್ಕೆ ಅನುಸಾರವಾಗಿ ಹಬ್ಬ ಆಚರಿಸಲಾಗಿತ್ತು. ಕೇರಳದಲ್ಲಿ ಆಗಸ್ಟ್ 22ರಂದು ಚಂದ್ರದರ್ಶನ ಆದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಇಂದು ಬಕ್ರೀದ್ ಆಚರಿಸಲಾಗುತ್ತಿದೆ. ಇಂದು ಬೆಳ್ಳಂಬೆಳಗ್ಗೆ ಮುಸ್ಲಿಂ ಬಾಂಧವರು ಮಸೀದಿಗಳಿಗೆ ಬಂದು ಸಾಮೂಹಿಕ ನಮಾಜ್ ಸಲ್ಲಿಸಿದರು. ಧರ್ಮಗುರುಗಳ ಆಣತಿಯ ಮೇರೆಗೆ ಧಾರ್ಮಿಕ ವಿದಿ-ವಿಧಾನದಲ್ಲಿ ಪಾಲ್ಗೊಂಡರು. ನಂತರ, ಧರ್ಮಪ್ರವಚನ ನೆರವೇರಿತು.
ಆಚರಣೆ ಏಕೆ?: ಪ್ರವಾದಿ ಇಬ್ರಾಹಿಂ ತನ್ನ ಮಗ ಇಸ್ಮಾಯಿಲ್‍ನನ್ನು ಅಲ್ಲಾಹುನಿಗೆ ತ್ಯಾಗದ ಸಂಕೇತವಾಗಿ ಬಲಿ ನೀಡಲು ಮುಂದಾಗಿದ್ದರು. ಈ ಸಂದರ್ಭ ದೇವದೂತ ಪ್ರತ್ಯಕ್ಷವಾಗಿ ಮಗನ ಬದಲಾಗಿ ಕುರಿಯನ್ನು ಬಲಿ ಕೊಡಲು ಆದೇಶಿಸಿದ್ದ. ಈ ದಿನವನ್ನು ಬಕ್ರೀದ್ ಎಂದು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ನಮಾಜ್ ನಂತರ ಮನೆಯಲ್ಲಿ ಕುರುಬಾನಿ ಮಾಡಿ ಬಂಧುಗಳಿಗೆ- ಗೆಳೆಯರಿಗೆ ಕುರಿ ಮಾಂಸವನ್ನು ಹಂಚಲಾಗುತ್ತದೆ. ಮಸೀದಿ ಆವರಣದಲ್ಲೂ ನಿರ್ಗತಿಕರಿಗೆ ನಮಾಜ್ ನಂತರ ಧನಸಹಾಯ ಮಾಡಲಾಯ್ತು.
ಇಂದ್ರಾಣಿ ನೂರಾನಿ ಮಸೀದಿ ಧರ್ಮಗುರು ಮುಸೀಯುಲ್ಲಾ ಖಾನ್ ಮಾತನಾಡಿ, ಇದು ಸೌಹಾರ್ದದ ಹಬ್ಬ. ಹಿಂದೂ-ಮುಸ್ಲೀಮರು ಅಣ್ಣ-ತಮ್ಮಂದಿರಂತೆ ಜೀವಿಸೋಣ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯ, ಇಬ್ಬರೂ ಜೊತೆಯಾಗಿದ್ದರೆ ಪ್ರಪಂಚದಲ್ಲಿ ಮಿಂಚಲಿದೆ. ನಮಾಜ್ ಪಠಿಸಿದೆವು. ಪ್ರತಿಯೊಬ್ಬರು ಶುಭಾಶಯ ಹಂಚಿಕೊಂಡೆವು. ಮನೆಗೆ ಹೋಗಿ ಆಡು ಅಥವಾ ಕುರಿಯನ್ನು ಬಲಿಕೊಟ್ಟು ಹಬ್ಬದೂಟ ಮಾಡುತ್ತೇವೆ. ಬಡ ಬಗ್ಗರಿಗೂ ನಾವು ಇಂದು ಸಹಾಯ ಮಾಡಬೇಕು ಎಂದು ಖುರಾನ್ ನಲ್ಲಿ ಉಲ್ಲೇಖವಿದೆ ಅದರಂತೆ ಬಕ್ರೀದ್ ಆಚರಣೆ ಮಾಡುತ್ತೇವೆ ಎಂದರು.
ಜಾಮಿಯಾ ಮಸೀದಿ ಅಧ್ಯಕ್ಷ ಶಬ್ಬೀರ್ ಅಹಮ್ಮದ್ ಮಾತನಾಡಿ, ಇಂದು ಕರಾವಳಿಯಲ್ಲಿ ಹಬ್ಬ ಆಚರಿಸುತ್ತೇವೆ. ನಮ್ಮ ಧರ್ಮಗುರುಗಳ ಆದೇಶದಂತೆ ಕುರಿಯನ್ನು ದೇವರಿಗೆ ಬಲಿಕೊಡುತ್ತೇವೆ. ದೇಶದ ಎಲ್ಲಾ ವಾಸಿಗಳಿಗೆ ಹಬ್ಬದ ಶುಭಾಶಯ. ಅಲ್ಲಾಹು ಎಲ್ಲರಿಗೆ ಒಳ್ಳೇದು ಮಾಡಲಿ ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದರು.