ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಗೌಡಗೆ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇಂದು ರಾಜೀವ್ ಗೌಡ 2 ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾಗುವ ಹಿನ್ನೆಲೆ ಚಿಕ್ಕಬಳ್ಳಾಪುರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಹಿಂದೆ ವಿಚಾರಣೆ ವೇಳೆ ನ್ಯಾಯಾಧೀಶರು ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದ್ದರು. ಅದರಂತೆ ಇದೀಗ ಜಾಮೀನು ಮಂಜೂರು ಮಾಡಿ, ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕತ್ತಲು ಹೋದ ಮೇಲೆ ಬೆಳಕು ಬಂದೇ ಬರುತ್ತೆ – ಬಂಧನಕ್ಕೊಳಗಾದ ಪತಿ ನೆನೆದು ಭಾವುಕರಾದ ರಾಜೀವ್ ಗೌಡ ಪತ್ನಿ
ನ್ಯಾ. ಮೊಹಮ್ಮದ್ ರೋಷನ್ ಶಾ ಅವರ ಪೀಠದವು 50,000 ರೂ. ಷರತ್ತು ಬದ್ಧ ಬಾಂಡ್ ನೀಡಿ, ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ ರಾಜೀವ್ ಗೌಡ ಬೆಂಬಲಿಗರಿಗೆ ನ್ಯಾಯಾಧೀಶರು ಖಡಕ್ ವಾರ್ನಿಂಗ್ ನೀಡಿದ್ದು, ನ್ಯಾಯಾಲಯದ ಆವರಣದ ಒಳಗೆ ಆಗಲಿ, ಹೊರಗೆ ಆಗಲಿ ಜೈಕಾರ ಹಾಕುವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ. ಒಂದು ವೇಳೆ ಹಾಗೇ ಮಾಡಿದರೆ ನ್ಯಾಯಾಲಯಕ್ಕೆ ಮಾಡಿದ ಅಗೌರವ ಎಂದು ತಾಕೀತು ಮಾಡಿದ್ದಾರೆ.

