ಕೋಟಿ ಕೋಟಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯ್ತಿಗಳು!

Public TV
2 Min Read

– ಕತ್ತಲಲ್ಲಿ ಮುಳುಗಿದ ಬಾಗಲಕೋಟೆಯ 100ಕ್ಕೂ ಹೆಚ್ಚು ಗ್ರಾಮಗಳು

ಬಾಗಲಕೋಟೆ: ಗ್ರಾಮ ಪಂಚಾಯ್ತಿಗಳು ಗ್ರಾಮದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ, ಅಭಿವೃದ್ದಿಗಾಗಿ ಹುಟ್ಟು ಹಾಕಿದ ಸ್ಥಳೀಯ ಸಂಸ್ಥೆಗಳು. ಗ್ರಾಮದಲ್ಲಿ ರಸ್ತೆ, ವಿದ್ಯುತ್, ನೀರು ಎಲ್ಲವನ್ನೂ ಕಲ್ಪಿಸಬೇಕಾಗಿರೋದು ಗ್ರಾಪಂ ಜವಾಬ್ದಾರಿ ಹಾಗೂ ಕರ್ತವ್ಯ. ಆದರೆ ಆ ಜಿಲ್ಲೆಯಲ್ಲಿ ಗ್ರಾ.ಪಂಗಳೇ ಗ್ರಾಮಗಳನ್ನು ಅಂಧಕಾರದಲ್ಲಿ ಮುಳುಗಿಸಿವೆ. ಗ್ರಾ.ಪಂ ಬೇಜವಾಬ್ದಾರಿತನದಿಂದ 35ಕ್ಕೂ ಹೆಚ್ಚು ಹಳ್ಳಿಗಳು ಕತ್ತಲಮಯವಾಗಿವೆ. ರಾತ್ರಿ ಬೀದಿಯಲ್ಲಿ ಜನರು ಭಯದಲ್ಲಿ ಸಂಚರಿಸಬೇಕಾಗಿದೆ.

ಹೌದು. ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಪಂ ನ ಬೇಜವಾಬ್ದಾರಿತನದಿಂದ ಹಳ್ಳಿ ಜನರು ರಾತ್ರಿಯಾದರೆ ಕತ್ತಲಲ್ಲಿ ಕನವರಿಸಬೇಕಾಗಿದೆ. ಯಾಕೆಂದರೆ ಬಾಗಲಕೋಟೆ ಜಿಲ್ಲೆಯಲ್ಲಿ 198 ಗ್ರಾಪಂಗಳಿಂದ ಬರೊಬ್ಬರಿ 47 ಕೋಟಿ ಕರೆಂಟ್ ಬಿಲ್ ಬಾಕಿ ಇದೆ. ಇದರಿಂದ ಹೆಸ್ಕಾಮ್ ಬಾಕಿ ಉಳಿಸಿಕೊಂಡ ಗ್ರಾಪಂಗಳ ವಿದ್ಯುತ್ ಸಂಪರ್ಕ ಕಡಿತ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 35 ಕ್ಕೂ ಅಧಿಕ ಗ್ರಾಪಂ ಕಚೇರಿ ಹಾಗೂ ಆ ಗ್ರಾಪಂ ವ್ಯಾಪ್ತಿಯಲ್ಲಿನ ನೂರಕ್ಕೂ ಹೆಚ್ಚು ಹಳ್ಳಿಗಳ ಬೀದಿದೀಪಗಳ ವಿದ್ಯುತ್ ಕಡಿತ ಮಾಡಲಾಗಿದೆ. ಇದರಿಂದ ಗ್ರಾಮಸ್ಥರು ರಾತ್ರಿ ಕತ್ತಲಲ್ಲಿ ಕನವರಿಸಬೇಕಾಗಿದೆ. ಬೀದಿಯಲ್ಲಿ ಭಯದಲ್ಲಿ ಸಂಚರಿಸಬೇಕಾಗಿದೆ. ರಸ್ತೆಯಲ್ಲಿ ಹುಳು ಹುಪ್ಪಡಿಗಳು ಓಡಾಡುತ್ತವೆ. ಕತ್ತಲಲ್ಲಿ ಯಾರಿಗಾದರೂ ಏನಾದರೂ ತೊಂದರೆ ಆದರೆ ಯಾರು ಜವಾಬ್ದಾರಿ, ಕೂಡಲೇ ವಿದ್ಯುತ್ ಬಿಲ್ ಬಾಕಿ ಪಾವತಿಸಿ ಕತ್ತಲಿಂದ ಮುಕ್ತಿ ನೀಡಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಸದ್ಯ ಬಾಗಲ ತಾಲೂಕಿನ ಮುನಾಳ, ಗದ್ದನಕೇರಿ, ಸೀಗಿಕೇರಿ, ನೀರಲಕೇರಿ ಗ್ರಾಪಂಗಳು, ಹುನಗುಂದ ತಾಲೂಕು, ಇಳಕಲ್ ತಾಲೂಕಿನ ಗ್ರಾಪಂ ಸೇರಿ ಒಟ್ಟು 35 ಕ್ಕೂ ಅಧಿಕ ಗ್ರಾಪಂ ವ್ಯಾಪ್ತಿಯ ಬೀದಿದೀಪಗಳ ವಿದ್ಯುತ್ ಕಡಿತ ಮಾಡಲಾಗಿದೆ. ಆದರೆ ಕುಡಿಯುವ ನೀರು ಸರಬರಾಜು ಮಾಡೋದಕ್ಕೆ ಬೇಕಾದ ವಿದ್ಯುತ್ ಕಡಿತ ಮಾಡಿಲ್ಲ ಎನ್ನೋದು ಸ್ವಲ್ಪ ಸಮಾಧಾನಕರ ಸಂಗತಿ. ಬಾಗಲಕೋಟೆ ಜಿಲ್ಲೆಯಲ್ಲಿ 198 ಗ್ರಾಪಂ ನಿಂದ ಪ್ರತಿ ತಿಂಗಳು ಮೂರು ಕೋಟಿ ಬಿಲ್ ಬರಬೇಕು. ಆದರೆ ಸರಿಯಾಗಿ ತುಂಬದ ಕಾರಣ 2016-17 ನೇ ಸಾಲಿನಿಂದ ಇದುವರೆಗೂ ಹೆಸ್ಕಾಮ್ ಬಾಗಲಕೋಟೆ ವೃತ್ತದಲ್ಲಿ 24,79,81 ಸಾವಿರ, ಜಮಖಂಡಿ ವೃತ್ತದಿಂದ 5,562 ಸಾವಿರ, ಮುಧೋಳ ವೃತ್ತದಿಂದ 17,19,67 ಸಾವಿರ. ಒಟ್ಟು 47,5,12 ಸಾವಿರ ಬಾಕಿ ಉಳಿದಿದೆ. ಇದನ್ನೂ ಓದಿ: ಅತ್ತೆ ಮನೆಗೆ ಮತ ಕೇಳಲು ಹೋದ ಸಿಎಂ ಬಸವರಾಜ ಬೊಮ್ಮಾಯಿ

ಹೆಸ್ಕಾಮ್ ಎಮ್ ಡಿ ಆದೇಶದ ಪ್ರಕಾರ ಬಾಕಿ ಉಳಿಸಿಕೊಂಡ ಹಿನ್ನೆಲೆ ಸಂಪರ್ಕ ಕಡಿತ ಮಾಡುತ್ತಿದ್ದೇವೆ. ಇದು ಅನಿವಾರ್ಯ ಯಾವ ಪಂಚಾಯ್ತಿಯಿಂದ ಬಾಕಿ ಪಾವತಿಸಲಾಗುತ್ತದೆ ಪುನಃ ಸಂಪರ್ಕ ಕಲ್ಪಿಸುತ್ತೇವೆ. ಬಾಕಿ ನೀಡದವರೆಗೂ ವಿದ್ಯುತ್ ಸಂಪರ್ಕ ಕಡಿತ ಕಾರ್ಯ ಮುಂದುವರಿಯುತ್ತದೆ ಅಂತ ಹೆಸ್ಕಾಮ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಗ್ರಾಪಂ ಪಿಡಿಒ ಗಳು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೆಸ್ಕಾಮ್ ಅಧಿಕಾರಿಗಳ ಜೊತೆಯೂ ಮಾತಾಡಲಾಗಿದೆ. ಇನ್ನೆರಡು ದಿನದಲ್ಲಿ ಸಮಸ್ಯೆ ಸರಿಯಾಗುವ ವಿಶ್ವಾಸ ಇದೆ. ಗ್ರಾಪಂ ಅನುದಾನದಲ್ಲಿ ವಿದ್ಯುತ್ ಬಿಲ್ ಪಾವತಿಸುತ್ತೇವೆ ಅಂತಿದ್ದಾರೆ. ಒಟ್ಟಿನಲ್ಲಿ ಗ್ರಾಮದ ಶ್ರೇಯೋಭೀವೃದ್ದಿಗೆ ಇರಬೇಕಿದ್ದ ಗ್ರಾಪಂಗಳಿಂದಲೇ ಗ್ರಾಮಕ್ಕೆ ಕತ್ತಲು ಆವರಿಸುತ್ತಿದೆ. ಆದಷ್ಟು ಬೇಗ ಜಿಪಂ ಅಧಿಕಾರಿಗಳು ಹೆಸ್ಕಾಮ್ ಅಧಿಕಾರಿಗಳು ಚರ್ಚೆ ಮಾಡಿ ಈ ಸಮಸ್ಯೆ ಬಗೆಹರಿಸಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *