ದೇವೆಗೌಡ್ರು ಮಣ್ಣಿನ ಮಗನಾದ್ರೆ ನೀವೆಲ್ಲಾ ಕಲ್ಲಿನ ಮಕ್ಕಳೇ: ರೈತರಿಗೆ ಈಶ್ವರಪ್ಪ ಪ್ರಶ್ನೆ

Public TV
2 Min Read

ಬಾಗಲಕೋಟೆ: ಜೆಡಿಎಸ್ ವರಿಷ್ಠ ದೇವೆಗೌಡ ಅವರು ಮಣ್ಣಿನ ಮಗ ಅಂತ ಹೇಳುತ್ತಾರೆ. ಹಾಗಾದರೆ ನೀವೆಲ್ಲಾ ಕಲ್ಲಿನ ಮಕ್ಕಳಾ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಗ್ರಾಮಸ್ಥರನ್ನು ಪ್ರಶ್ನಿಸಿದ್ದಾರೆ.

ಜಮಖಂಡಿ ಉಪಚುನಾವಣೆ ಹಿನ್ನೆಲೆಯಲ್ಲಿ ಕೊಣ್ಣೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಾರು ಮಣ್ಣಿನ ಮಗನೋ? ಏನೋ ಆ ಭಗವಂತನಿಗೆ ಗೊತ್ತು ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯ ಅವರಂತ ಕೆಟ್ಟ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ ಅಂತಾ ದೇವೇಗೌಡರು ವ್ಯಂಗ್ಯವಾಡಿದ್ದರು. ಆದರೆ ಈಗ ಸಿದ್ದರಾಮಯ್ಯ ಮತ್ತು ದೇವೇಗೌಡರು ಒಂದಾಗಿದ್ದಾರೆ ಎಂದರು.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೆಂಬಲ ನೀಡಿ, ಸಮಾಜ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಹೀಗಾಗಿ ಅದರ ಪರಿಣಾಮವನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನುನಭವಿಸಿದರು ಎಂದು ಆರೋಪಿಸಿದರು.

ಮೋದಿ ಮತ್ತೆ ಪ್ರಧಾನಿ:
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ನರೇಂದ್ರ ಮೋದಿ ಅವರು ಪುನಃ ಪ್ರಧಾನಿಯಾಗುವುದು ಅಷ್ಟೇ ಸತ್ಯ. ದೈವ ಭಕ್ತಿ, ಹೆಣ್ಣು ಮಕ್ಕಳ ಕಾಳಜಿ, ಗೋವುಗಳ ಪ್ರೀತಿಯನ್ನು ನರೇಂದ್ರ ಮೋದಿ ಹೊಂದಿದ್ದಾರೆ. ಪ್ರಧಾನಿ ಬಗ್ಗೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಹೆಸರಿಗೆ ಮಾತ್ರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಥಾನಮಾನ ಸಿಕ್ಕಿದೆ ಎಂದು ತಿರುಗೇಟು ಕೊಟ್ಟರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೌನ, ಮೌನಿಬಾಬಾ ಅಂತ ದೇಶದ ಜನರು ಕರೆಯುತ್ತಿದ್ದರು. ಪಾಕಿಸ್ತಾನ ಯೋಧರು ನಮ್ಮ ಯೋಧರ ಜೀವ ತೆಗೆದರೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಿದ್ದಂತೆ, ಯೋಧರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಪಾಕಿಸ್ತಾನ ಯೋಧರಿಗೆ ಬಿಸಿ ಮುಟ್ಟಿಸಿದರು ಎಂದರು.

ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಗಿಲೆನೆಯ ನಾಲ್ಕು ಪೀಠದ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆಗ ಪ್ರತಿ ಮಠಕ್ಕೂ 4 ಕೋಟಿ ರೂ. ಹಣ ನೀಡಲು ನಿರ್ಧಾರ ಮಾಡಲಾಗಿತ್ತು. ಆದರೆ ಕಾಂಗ್ರೆಸ್‍ನವರು ಹಣವನ್ನು ನೀಡಲೇ ಇಲ್ಲ. ಕನಕದಾಸ ಜಯಂತಿಗೆ ಸರ್ಕಾರಿ ರಜೆ ಘೋಷಿಸಿದ್ದು ಬಿ.ಎಸ್.ಯಡಿಯೂರಪ್ಪನವರು. ಕುರುಬರು ನಮಗೆ ವೋಟ್ ಹಾಕುತ್ತಾರೆ ಅಂತಾ ಕಾಂಗ್ರೆಸ್‍ನವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ನೀವು ಸೇರಿದ ಸಂಖ್ಯೆ ನೋಡಿದರೆ ಅದೆಲ್ಲ ಸುಳ್ಳು ಅಂತಾ ಅನಿಸುತ್ತದೆ ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಮೆಚ್ಚಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *