ವಿವೇಕಾನಂದರ ಆದರ್ಶಗಳನ್ನು ನಾವೆಲ್ಲ ಅನುಸರಿಸೋಣ: ಗೋವಿಂದ ಕಾರಜೋಳ

Public TV
1 Min Read

ಬಾಗಲಕೋಟೆ: ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಅಂಗವಾಗಿ ಬಾಗಲಕೋಟೆ ಜಿಲ್ಲಾಡಳಿತ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಸಿಎಂ ಕಾರಜೋಳ, ವಿವೇಕಾನಂದ ಅವರು ಯುವಜನತೆಯ ಆಶಾಕಿರಣ ಎಂದು ಹೇಳಿದ್ದಾರೆ.

ಯುವ ಶಕ್ತಿಯ ಪ್ರಾಮುಖ್ಯತೆ ಬಹಳಷ್ಟಿದೆ. ಸದಾ ಪರಿಶ್ರಮ, ಶ್ರದ್ಧೆ, ನಿರಂತರ ಪ್ರಯತ್ನದಿಂದ ಸಾಧನೆ ಮಾಡಬಹುದು, ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರೀ ಎನ್ನುವ ಸಂದೇಶದೊಂದಿಗೆ ಯುವ ಸಮೂಹಕ್ಕೆ ಪ್ರೇರೆಪಿಸಿದ್ದಾರೆ. ಇಡೀ ಪ್ರಪಂಚವನ್ನೆಲ್ಲಾ ಪರ್ಯಟನೆ ಮಾಡಿ, ವಿದೇಶಗಳು ಶಿಕ್ಷಣದಿಂದ ಅಭಿವೃದ್ಧಿಯಾಗುತ್ತಿವೆ. ಅದೇ ಮಾದರಿಯಲ್ಲಿ ನಮ್ಮ ದೇಶವು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು ಎನ್ನುವುದು ವಿವೇಕಾನಂದ ಅವರ ಆಶಯವಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಶೇ.35 ರಷ್ಟು ಯುವ ಶಕ್ತಿಯನ್ನು ಹೊಂದಿರುವ ಭಾರತವು ಸಬಲೀಕರಣವಾಗಲು ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು. ಯಾವುದೇ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೆ ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಭಾರತವು ವಿಶ್ವಗುರುವಾಗುವಷ್ಟು ಯುವ ಶಕ್ತಿಯನ್ನು ಹೊಂದಿದೆ. ವಿವೇಕಾನಂದ ಅವರ ಆಯಶದಂತೆ ಯುವಕರು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಯುವಜನೆತೆಗೆ ಕರೆಕೊಟ್ಟರು.

ರಾಜ್ಯದಲ್ಲಿ 2.5 ಲಕ್ಷ ರೂ. ಗಿಂತ ಕಡಿಮೆ ಆದಾಯವಿರುವ 430 ಸರ್ಕಾರಿ ಪದವಿ ಕಾಲೇಜುಗಳ 2.48 ಲಕ್ಷ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಗುವುದು ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿದರು. ಸಮಾರಂಭದಲ್ಲಿ ಸಂಸದರಾದ ಶ್ರೀ ಪಿ.ಸಿ. ಗದ್ದಿಗೌಡರ್, ಶಾಸಕರಾದ ಶ್ರೀ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಎಸ್.ಪಿ ಲೋಕೇಶ್, ಸಿಇಓ ಗಂಗೂಬಾಯಿ ಮಾನಕರ್ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *