ಬಾಗಲಕೋಟೆ ಹಾಳು ಮಾಡಲು ಸಿದ್ದರಾಮಯ್ಯ ಬಂದಿದ್ದಾರೆ – ಈಶ್ವರಪ್ಪ ವ್ಯಂಗ್ಯ

Public TV
2 Min Read

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ನೆಗೆದು ಬಿದ್ದು ಈಗ ಬಾಗಲಕೋಟೆ ಜಿಲ್ಲೆ ಹಾಳು ಮಾಡಲು ಬಂದಿದ್ದಾರೆಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತದೆ ನೋಡೋಣ. ಸಿದ್ದರಾಮಯ್ಯ ಏನೇ ಚಾಲೆಂಜ್ ಹಾಕಿದರೂ ನಾನು ಸ್ವೀಕರಿಸುತ್ತೇನೆ. ಹಿಂದುಳಿದ ವರ್ಗದ ಜನರಿಗೆ ನೀವು ಏನ್ ಮಾಡಿದ್ದೀರಿ, ನಾವು ಏನ್ ಮಾಡಿದ್ದೇವೆ ಪಟ್ಟಿ ಇಡೋಣ ಅಂದ್ರೆ ಸಿದ್ದರಾಮಯ್ಯ ಓಡಿ ಹೋಗ್ತಾರೆ. ದಲಿತ, ಹಿಂದುಳಿದವರಿಗೆ ಸಿದ್ದರಾಮಯ್ಯ ಮೋಸ ಮಾಡಿದ್ದು, ಭಂಡತನದ ಹೇಳಿಕೆ ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಬರೀ ಬ್ಯಾಟಿಂಗ್ ಮಾಡ್ತಾರೆ. ಬ್ಯಾಟಿಂಗ್ ಮಾಡೋಕೆ ಇವ್ರಿಗೆ ಖುಷಿ. ಆದ್ರೆ ಬೌಲಿಂಗ್, ಫೀಲ್ಡಿಂಗ್ ಮಾಡಿ ಅಂದ್ರೆ ಓಡಿ ಹೋಗ್ತಾರೆ. ನಾನೇ ಹಿಂದುಳಿದ ವರ್ಗದ ಚಾಂಪಿಯನ್ ಅಂತಾರೆ. ಹಿಂದುಳಿದ ವರ್ಗದ ಜನ್ರಿಗೆ ಏನ್ ಮಾಡಿದ್ದೀರಿ ಎಂದು ಕೇಳಿದ್ರೆ ಸಿದ್ದರಾಮಯ್ಯ ಓಡಿ ಹೋಗ್ತಾರೆ. ಅವರು ಕೇವಲ ಪೇಪರ್ ಟೈಗರ್. ನಾನೇ ಹಿಂದುಳಿದ ವರ್ಗದ ಚಾಂಪಿಯನ್ ಎಂದು ಘೋಷಣೆ ಕೂಗಿಸ್ಕೋತಾರೆ. ಘೋಷಣೆ ಕೂಗಿಸಿಕೋಳ್ಳೋದಕ್ಕೋಸ್ಕರನೇ 50 ಜನರನ್ನು ಹೊರಗಡೆಯಿಂದ ಬಾದಾಮಿಗೆ ಕರ್ಕೊಂಡು ಬರ್ತಾರೆ ಎಂದು ಅವರು ಹೇಳಿದ್ರು.

ರಾಜ್ಯದಲ್ಲಿ ಒಂದು ಸರ್ಕಾರ ಎಂದು ಬದುಕಿಲ್ಲ. ಅರಣ್ಯಪ್ರದೇಶದಲ್ಲಿ ಕಾಡ್ಗಿಚ್ಚು ಉಂಟಾಗಿದ್ದು, ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಶಂಕರ್ ಅವರು ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿಯೇ ನಾನು ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದಾಗ ತಗೋತೀವಿ ಎಂದು ಹೇಳಿದ್ರು. ಆದ್ರೆ ಇದೂವರೆಗೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ರು.

ಒಂದೊಂದು ಎಕರೆ ಸುಟ್ಟು ಹೋದ್ರೆ ಎಷ್ಟು ಕೋಟಿ ಹೋಗುತ್ತೆ ಎಂದು ಆ ಭಗವಂತನಿಗೆ ಗೊತ್ತು. ಈ ಬಗ್ಗೆ ಒಂದು ತನಿಖೆಯನ್ನು ಮಾಡೋದಕ್ಕೂ ಸರ್ಕಾರ ತಯಾರಿಲ್ಲ. ಹೀಗಾಗಿ ಬಂಡೀಪುರದಲ್ಲಿ ನಡೆದ ಕಾಡ್ಗಿಚ್ಚಿನಿಂದ ಉಂಟಾದ ನಷ್ಟದ ಬಗ್ಗೆ ತನಿಖೆ ನಡೆಸಿ ಎಂದು ಇದೇ ವೇಳೆ ಒತ್ತಾಯಿಸಿದ್ರು.

ಜೆಡಿಎಸ್- ಕಾಂಗ್ರೆಸ್ ನ ಅನೇಕ ಶಾಸಕರು ಪಕ್ಷಕ್ಕೆ ಬರುವವರಿದ್ದಾರೆ. ಉಮೇಶ್ ಜಾಧವ್ ಒಬ್ಬರೇ ಅಂತಲ್ಲ. ಲೋಕಸಭೆ ಚುನಾವಣೆಗೂ ಮುನ್ನ ಆಗಬಹುದು. ಚುನಾವಣೆ ನಂತರವೂ ಆಗಬಹುದು. ಅನೇಕ ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಅವರು ತಿಳಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *