ರಾಜ್ಯದ 3 ವೈದ್ಯ ದಂಪತಿಗೆ ಕೊರೊನಾ ವೈರಸ್ ಶಂಕೆ

Public TV
1 Min Read

– ಹೋಳಿ ಹಬ್ಬಕ್ಕೆ ವಿದೇಶಕ್ಕೆ ಹೋಗಿದ್ದ ದಂಪತಿಗಳು

ಬಾಗಲಕೋಟೆ: ಕೊರೊನಾ ವೈರಸ್ ಇರುವ ಶಂಕೆ ವ್ಯಕ್ತವಾದ ಹಿನ್ನೆಲೆ ಜಿಲ್ಲೆಯಲ್ಲಿ ಮೂವರು ವೈದ್ಯ ದಂಪತಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.

ಈ ಮೂವರ ವೈದ್ಯರ ಕುಟುಂಬದ ಆರು ಜನರು ಹೋಳಿ ಹಬ್ಬದ ಪ್ರಯುಕ್ತ ವಿದೇಶಕ್ಕೆ ಪ್ರವಾಸ ಕೈಗೊಂಡಿದ್ದರು. ಈ ಕಾರಣದಿಂದ ಅವರಿಗೆ ಸೋಂಕು ತಗಲಿರುವ ಅನುಮಾನ ವ್ಯಕ್ತವಾಗಿದೆ. ಅವರ ಮನೆಯಲ್ಲೇ ಐಸೋಲೇಷನ್ ವಾರ್ಡ್ ಮಾಡಿ ಅವರನ್ನು ಅಲ್ಲಿಯೇ 14 ದಿನಗಳ ಕಾಲ ವೀಕ್ಷಣೆಗೆ ಇಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಾಗಲಕೋಟೆ ಡಿಎಚ್‍ಓ ಡಾ.ಅನಂತ ದೇಸಾಯಿ, ಈ ಮೂವರ ವೈದ್ಯರ ಕುಟುಂಬದ ಆರು ಜನರು, ಹೋಳಿ ಹಬ್ಬದ ಪ್ರಯುಕ್ತ ವಿದೇಶಕ್ಕೆ ಪ್ರವಾಸಕ್ಕೆಂದು ಹೋಗಿದ್ದರು. ಆದರೆ ಇವರಿಗೆ ರೋಗದ ಲಕ್ಷಣವಾಗಲಿ ಕೆಮ್ಮು, ಜ್ವರ ಏನೂ ಕಂಡುಬಂದಿಲ್ಲ. ಮುಂಜಾಗೃತ ಕ್ರಮವಾಗಿ ಅವರನ್ನು ಅವರ ಮನೆಯಲ್ಲೇ ಐಸೋಲೇಷನ್ ವಾರ್ಡ್ ನಲ್ಲಿ ಇಟ್ಟಿದ್ದೇವೆ. ಜೊತೆಗೆ ವಿದೇಶದಿಂದ ಬಂದಿರುವ ಇತರೆ ಐವರ ಮೇಲೂ ಆರೋಗ್ಯ ಇಲಾಖೆ ನಿಗಾ ವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಕೊರೊನಾ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್- ಇಬ್ಬರ ಬಂಧನ

ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ಎರಡನೇ ಬಲಿ ಪಡೆದುಕೊಂಡಿದೆ. ದೆಹಲಿಯ 69 ವರ್ಷದ ಮಹಿಳೆಗೆ ವಿದೇಶದಿಂದ ಮರಳಿದ್ದ ಪುತ್ರನಿಂದ ಕೊರೊನಾ ಸೋಂಕು ಹರಡಿತ್ತು. ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ (ಆರ್‍ಎಂಎಲ್) ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಇಂದು ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಮಾಡಿವೆ. ಇದನ್ನು ಓದಿ: ಕೊರೊನಾ ವೈರಸ್‍ಗೆ ದೇಶದಲ್ಲಿ ಎರಡನೇ ಬಲಿ

ಕಲಬುರ್ಗಿಯಲ್ಲಿ ಮಾರ್ಚ್ 11ರಂದು ಮೃತಪಟ್ಟ 76 ವರ್ಷದ ವೃದ್ಧರಿಗೆ ಕೊರೊನಾ ಸೋಂಕು ತಗಲಿದ್ದನ್ನು ಗುರುವಾರ ರಾತ್ರಿ ಆರೋಗ್ಯ ಸಚಿವ ಶ್ರೀರಾಮುಲು ಖಚಿತಪಡಿಸಿದ್ದರು. ಈ ಮೂಲಕ ಭಾರತದಲ್ಲಿ ಕೊರೊನಾ ಮೊದಲ ಬಲಿ ಪಡೆದಂತಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಮುಂದಿನ ಒಂದು ವಾರ ರಾಜ್ಯದಲ್ಲಿ ಎಲ್ಲೆಡೆ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳವನ್ನು ಬಂದ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *