ಭಕ್ತ ಸಾಗರದ ಮಧ್ಯೆ ಬನಶಂಕರಿದೇವಿ ರಥೋತ್ಸವಕ್ಕೆ ಚಾಲನೆ; ಇಂದಿನಿಂದ 1 ತಿಂಗಳು ಅದ್ಧೂರಿ ಜಾತ್ರೆ

2 Min Read

– ದೇವಿ ದರ್ಶನಕ್ಕೆ ಜಮಾಯಿಸಿದ ಜನ – ತೇರು ಎಳೆದು ಪುನೀತರಾದ ಭಕ್ತರು

ಬಾಗಲಕೋಟೆ: ದೇವಿಗೆ ಭಕ್ತಿಯಿಂದ ಪೂಜೆ, ಆವರಣದಲ್ಲಿ ಎತ್ತ ನೋಡಿದರೂ ಜನವೋ ಜನ. ಲಕ್ಷಾಂತರ ಭಕ್ತರ ಮಧ್ಯೆ ನಡೆದ ರಥೋತ್ಸವ. ರಥಕ್ಕೆ ಉತ್ತತ್ತಿ, ನಿಂಬೆ, ಬಾಳೆ ಹಣ್ಣು, ನಾಣ್ಯ ಎಸೆಯುತ್ತಿರುವ ಭಕ್ತರು. ಇದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಬನಶಂಕರಿ ದೇವಿ ಜಾತ್ರೆಯ (Banashankari Devi Jatre) ಸಂಭ್ರಮ.

ಹೌದು. ಅದು ಉತ್ತರ ಕರ್ನಾಟಕದ (Uttar Karnataka) ಪ್ರಸಿದ್ಧ ಜಾತ್ರೆ. ಕೇವಲ ಒಂದು ಎರಡು ದಿನ ನಡೆಯೋದಲ್ಲ. ಬರೊಬ್ಬರಿ 1 ತಿಂಗಳ ಕಾಲ ಹಗಲು ರಾತ್ರಿ ಸಂಭ್ರಮದಿಂದ ನಡೆಯುತ್ತದೆ. ಇಂದು ಆ ಜಾತ್ರೆಯ ಮೊದಲ ದಿನ, ಅದ್ಧೂರಿ ರಥೋತ್ಸವದ (Rathotsava) ಸಂಭ್ರಮದಿಂದ ಸಾಗಿತು. ಇದನ್ನೂ ಓದಿ: ಆನೇಕಲ್‌ | ಯಲ್ಲಮ್ಮ ದೇವಿ ದೇವಾಲಯದಲ್ಲಿ ಅದ್ಧೂರಿ ಬ್ರಹ್ಮರಥೋತ್ಸವ!

ಶಾಖಂಬರಿ ಶಕ್ತಿದೇವತೆ ಎಂದು ಹೆಸರಾದ ಸುಪ್ರಸಿದ್ಧ ಬನಶಂಕರಿದೇವಿ (Banashankari Devi) ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮದಿಂದ ನಡೆಯುತ್ತಿದೆ. ಇಂದಿನಿಂದ ತಿಂಗಳುಗಳ ಕಾಲ ಜಾತ್ರೆ ನಡೆಯಲಿದ್ದು ಇವತ್ತು ತೇರಿನ ಸಂಭ್ರಮ ಮನೆ ಮಾಡಿತ್ತು. ಗದಗ ಜಿಲ್ಲೆಯ ಮಾಡಲಗೇರಿಯಿಂದ ದೇವಿಗೆ ತೇರು ಎಳೆಯುವ ಹಗ್ಗವನ್ನು ನದಿಯಲ್ಲೇ ಎತ್ತಿನ ಬಂಡಿ ಮೂಲಕ ತರಲಾಯಿತು. ನಂತರ ಪೂಜೆ ಮಾಡಿ ಸಂಜೆ 5 ಗಂಟೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಸಾಗಿತು.

ಬನಶಂಕರಿ ದೇವಿ ಮಹಿಮೆಯೇ ಹಾಗೆ. ಬೇಡಿಕೊಂಡ ಬೇಡಿಕೆ ಈಡೇರಿಸುವ ಶಕ್ತಿದೇವತೆ ಎಂಬುದು ಜನರ ನಂಬಿಕೆ ಅದು ಇಂದಿಗೂ ಸುಳ್ಳಾಗಿಲ್ಲ. ಅದಕ್ಕಾಗಿ ದೇವಿ ದರ್ಶನಕ್ಕೆ ವರ್ಷವಿಡೀ ಭಕ್ತರು ಆಗಮಿಸುತ್ತಾರೆ. ಇನ್ನು ಬನಶಂಕರಿದೇವಿ ಜಾತ್ರೆಗೆ ದೇಶ ವಿದೇಶದಲ್ಲೂ ಭಕ್ತರಿದ್ದು, ಜಾತ್ರೆಗೆ ಲಕ್ಷಾಂತರ ಜನ ಆಗಮಿಸುತ್ತಾರೆ. ಅಂತೆಯೇ ಇಂದು ದೇವಿಯ ದರ್ಶನ ಪಡೆದ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಪುನೀತರಾದರು. ರಥಕ್ಕೆ ಉತ್ತತ್ತಿ ಹಣ್ಣು, ನಾಣ್ಯ ಎಸೆದು ಭಕ್ತಿ ಮೆರೆದರು. ಇದನ್ನೂ ಓದಿ: ವಿಜೃಂಭಣೆಯ ಅಂಬಾದೇವಿ ಮಹಾರಥೋತ್ಸವ – ಜಂಬೂಸವಾರಿಗೆ ಸಿಎಂ ಚಾಲನೆ

ಇನ್ನೂ ಜಾತ್ರೆ ಪ್ರಯುಕ್ತ ತಿಂಗಳ ಕಾಲ ನಾಟಕಗಳು ನಡೆಯಲಿವೆ. ಬನಶಂಕರಿದೇವಿ ಆವರಣದ ಸುತ್ತ ವಿವಿಧ ವಸ್ತುಗಳ ಮಳಿಗೆಗಳನ್ನೂ ತೆರೆಯಲಾಗಿದೆ. ಜಾತ್ರೆಗೆ ಬಂದ ಭಕ್ತರು ದೇವಿ ದರ್ಶನದ ಜೊತೆಗೆ ಮನರಂಜನೆ ಶಾಪಿಂಗ್ ಮಾಡಿ ಜಾತ್ರೆ ಎಂಜಾಯ್ ಮಾಡುತ್ತಾರೆ. ಯುವಕರಂತೂ ಜಾತ್ರೆ ಜೊತೆಗೆ ನಾಟಕ ನೋಡಿ ಹರ್ಷ ಪಡುತ್ತಾರೆ. ಹೀಗಾಗಿ ಇಲ್ಲಿಗೆ ಬರುವ ವ್ಯಾಪಾರಿಗಳು ಬನಶಂಕರಿ ತಾಯಿ ವ್ಯಾಪಾರಸ್ಥರಿಗೆ, ಕಲಾವಿದರಿಗೆ ಅನ್ನದಾತೆಯೂ ಆಗಿದ್ದಾಳೆ ಅಂತ ನಂಬುತ್ತಾರೆ.

Share This Article