– ಐವರು ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ
ಮಂಡ್ಯ: ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆ ನೌಕರರು ಬಗರ್‌ಹುಕುಂನಲ್ಲಿ ಅಕ್ರಮವಾಗಿ ಮಂಜೂರು ಮಾಡಿದ 11 ಮಂದಿ ಕಂದಾಯ ಇಲಾಖೆ ಅಧಿಕಾರಿಗಳು ಲೋಕಾಯುಕ್ತರ ದಾಳಿಯ ಬಲೆಗೆ ಬಿದ್ದಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಸರ್ಕಾರಿ ದಾಖಲೆಗಳನ್ನ ತಿದ್ದಿ, ನಕಲಿ ದಾಖಲೆಗಳನ್ನ ಸೃಷ್ಟಿಸಿ ಪಲಾನುಭವಿಗಳಿಗೆ ಅಕ್ರಮವಾಗಿ ಸರ್ಕಾರಿ ಜಮೀನು ಮಂಜೂರು ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲೆಯ ನಾಗಮಂಗಲ ತಾಲೂಕಿನ ಕಂದಾಯ ಇಲಾಖೆಯ 11 ಮಂದಿ ವಿರುದ್ಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಎಫ್‌ಆರ್‌ಐ ದಾಖಲಿಸಲಾಗಿದೆ. ಎಲ್ & ಟಿ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಸತೀಶ್ ಹೆಚ್.ಪಿ., ಶಿರಸ್ತೆದಾರ್ ರವಿಶಂಕರ್, ಕಾಂತಾಪುರ ಗ್ರಾಮ ಸಹಾಯಕ ಎಸ್.ಯೋಗೇಶ್, ರೆಕಾರ್ಡ್ ರೂಮಿನ ದ್ವಿತೀಯ ದರ್ಜೆ ಸಹಾಯಕ ಯೋಗೇಶ್, ರೆಕಾರ್ಡ್ ರೂಮ್‌ನ ಶಿರಸ್ತೆದಾರ್ ಉಮೇಶ್, ರಾಕಾರ್ಡ್ ರೂಮ್‌ನ ದ್ವಿತೀಯ ದರ್ಜೆ ಸಹಾಯಕ ಗುರುಮೂರ್ತಿ, ನಾಗಮಂಗಲ ಟಿ.ಬಿ ಬಡಾವಣೆ ಯಶವಂತ್, ಮೈಸೂರಿನ ಪತ್ರ ಬರಹಗಾರ ಚಿನ್ನಸ್ವಾಮಿ, ಹಿಂದಿನ ಎಲ್ ಅಂಡ್ ಡಿ. ದ್ವಿತೀಯ ದರ್ಜೆ ಸಹಾಯಕ ವಿಜಯ್ ಕುಮಾರ್, ನಾಗಮಂಗಲ ಪಟ್ಟಣದ ಮಹಮದ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಾಗಮಂಗಲ ತಾಲ್ಲೂಕಿನ ಹೆಚ್.ಎನ್ ಕಾವಲು, ಚಿಕ್ಕಜಟಕ, ದೊಡ್ಡ ಜಟಕ, ಕರಡಹಳ್ಳಿ ಹಾಗೂ ಮುಂತಾದ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯ ದರಖಾಸ್ತು ಮಂಜೂರಾತಿ ದಾಖಲಾತಿಗಳಾದ ಸಾಗುವಳಿ ಚೀಟಿ, ವಿತರಣಾ ವಹಿ, ಅಧಿಕೃತ ಜ್ಞಾಪನ, ಕಿಮ್ಮತ್ತು ಮತ್ತು ನೋಟಿಸ್ ದಾಖಲಾತಿಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ನಕಲಿ ದಾಖಲೆ ಸೃಷ್ಟಿಸಿ ಕಚೇರಿಯ ಮೂಲ ದಾಖಲಾತಿಗಳನ್ನ ತಿದ್ದಿ ಅಕ್ರಮವಾಗಿ 320 ಸರ್ಕಾರಿ ಭೂಮಿ ಮಂಜೂರು ಮಾಡಿಕೊಂಡು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ 2026 ಜನವರಿ 12 ರಂದು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದರು.
ಇದರ ಆಧಾರದ ಮೇಲೆ ಮಂಡ್ಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ನೇತೃತ್ವದಲ್ಲಿ ನಾಗಮಂಗಲ ತಾಲೂಕು ಕಚೇರಿ, ಸಂಬಂಧಪಟ್ಟ ಅಧಿಕಾರಿಗಳ ಮನೆ, ಸರ್ಕಾರಿ ವಸತಿ ಗೃಹ, ಜೆರಾಕ್ಸ್ ಅಂಗಡಿ ಹಾಗೂ ಹೊಟೇಲ್‌ಗಳನ್ನು ಶೋಧನೆ ಮಾಡಿದಾಗ ಸರ್ಕಾರಿ ನೌಕರರು ತಮ್ಮ ಅಧಿಕಾರ ದುರುಪಯೋಗ ಹಾಗೂ ಅಪರಾಧಿಕ ಕೃತ್ಯ ನಡೆಸಿರುವುದು ಲೋಕಾಯುಕ್ತ ಪೊಲೀಸ್ ವರದಿಯಿಂದ ದೃಢಪಟ್ಟಿದೆ. ಗ್ರಾಮ ಸಹಾಯಕ ಯೋಗೇಶ್ ಮನೆ ಹಾಗೂ ಅವರಿಗೆ ಸೇರಿದ ಕಾರನ್ನು ಶೋಧನೆ ಮಾಡಿದಾಗ ನಾಗಮಂಗಲ ತಾಲ್ಲೂಕು ರೆಕಾರ್ಡ್ ರೂಂನ ಮೂಲ ದಾಖಲಾತಿಗಳು, ವಿವಿಧ ಸಾರ್ವಜನಿಕರುಗಳ ಹೆಸರಿನಲ್ಲಿ ಸೃಷ್ಟಿಸಿರುವ ನಕಲಿ ಚಲನ್‌ಗಳು ತಿಳುವಳಿಕೆ ನೋಟಿಸ್‌ಗಳು, ಸಾಗುವಳಿ ಚೀಟಿ, ಅಧಿಕೃತ ಜ್ಞಾಪನ ಹಾಗೂ ಕೆಲಸವು ನಕಲಿ ದಾಖಲೆಗಳು ಸಿಕ್ಕಿದ್ದು, ಈ ಬಗ್ಗೆ ಗ್ರಾಮ ಸಹಾಯಕ ಯೋಗೇಶ್‌ನನ್ನು ವಿಚಾರಣೆಗೊಳಪಡಿಸಿದಾಗ ಭೂ ಹಗರಣ ಬೆಳಕಿಗೆ ಬಂದಿದೆ. ಕೇವಲ ಇಷ್ಟೇ ಮಾತ್ರವಲ್ಲ ನಾಗಮಂಗಲದಲ್ಲಿ ಅಪಾರ ಪ್ರಮಾಣದ ಅಕ್ರಮವಾಗಿ ಸೂಕ್ತ ತನಿಖೆ ಆಗಲಿ ಎಂದು ಮಾಜಿ ಶಾಸಕ ಸುರೇಶ್‌ಗೌಡ ಆಗ್ರಹ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ & ಟಿ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಹೆಚ್.ವಿ.ಸತೀಶ್, ಶಿರಸ್ತೆದಾರ್ ರವಿಶಂಕರ್, ಕಾಂತಾಪುರ ಗ್ರಾಮ ಸಹಾಯಕ ಎಸ್.ಯೋಗೇಶ್, ಶಿರಸ್ತೆದಾರ್ ಉಮೇಶ್ ಹಾಗೂ ರೆಕಾರ್ಡ್ ರೂಂ ದ್ವಿತೀಯ ದರ್ಜೆ ಸಹಾಯಕ ಗುರುಮೂರ್ತಿ ಇವರನ್ನು ನಾಗಮಂಗಲ ಪೊಲೀಸರು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಒಟ್ಟಾರೆ 320 ಎಕ್ರೆ ಜಾಗವನ್ನ ಅಕ್ರಮವಾಗಿ ಮಂಜೂರು ಮಾಡಿರುವುದಾಗಿ ತಿಳಿದು ಬಂದಿದ್ದು, ಸಾವಿರಾರು ಕೋಟಿ ಭೂ ಹಗರಣ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಎಲ್ಲವೂ ಹೊರಬರಬೇಕಿದೆ.


