ಮಗುವನ್ನು ನೆಲಕ್ಕೆ ಬಡಿದಿದ್ದ ತಂದೆ- ಚಿಕಿತ್ಸೆ ಫಲಿಸದೇ ಕಂದಮ್ಮ ಸಾವು

Public TV
1 Min Read

ಧಾರವಾಡ: ತಂದೆಯಿಂದಲೇ ನೆಲಕ್ಕೆ ಎಸೆಯಲ್ಪಟ್ಟಿದ್ದ ಹೆಣ್ಣು ಮಗು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

ಶ್ರೇಯಾ (1 ವರ್ಷ) ಮೃತ ದುರ್ದೈವಿ ಕಂದಮ್ಮ. ಈಕೆಯನ್ನು ತಂದೆ ಶಂಭುಲಿಂಗಯ್ಯ ಕೊಲೆ ಮಾಡಿದ್ದಾನೆ. ಈತ ಧಾರವಾಡ (Dharwad) ತಾಲೂಕಿನ ಯಾದವಾಡ ಗ್ರಾಮದ ನಿವಾಸಿ. ಇದನ್ನೂ ಓದಿ: ಮಗು ಜೋರಾಗಿ ಅಳುತ್ತೆಂದು ನೆಲಕ್ಕೆ ಹೊಡೆದ ತಂದೆ!

ಏನಿದು ಪ್ರಕರಣ: ನಾಲ್ಕು ವರ್ಷಗಳ ಹಿಂದೆ ಶಂಭಯ್ಯ ಮತ್ತು ಸವಿತಾ ಮದುವೆಯಾಗಿದ್ದರು. ಈ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದರು. ಮೊದಲನೇಯ ಗಂಡು ಮಗುವಿಗೆ ಮೂರು ವರ್ಷವಾಗಿದೆ. ಶಂಭಯ್ಯ ಧಾರವಾಡ ನಗರದಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ನಿತ್ಯ ವಿಪರೀತವಾಗಿ ಕುಡಿಯುತ್ತಿದ್ದ ಶಂಭಯ್ಯ ಮಂಗಳವಾರ ತಡರಾತ್ರಿ ತನ್ನ ಮೇಲೆ ಹಲ್ಲೆ ಮಾಡಿ ಬಳಿಕ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ಸವಿತಾ ಮತ್ತು ಸಹೋದರ ಅಳಿಯ ಕಲ್ಲಯ್ಯ ನೋವು ತೋಡಿಕೊಂಡಿದ್ದಾರೆ.

ಮಲಗುವಾಗ ಮಗು ಅಳುತ್ತೆ ಎಂಬ ಕಾರಣಕ್ಕೆ ಮಗುವನ್ನ ನೆಲಕ್ಕೆ ಎತ್ತಿ ಬಡಿದಿದ್ದಾನೆ. ಪರಿಣಾಮ ಮಗು ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಕೂಡಲೇ ಆಕೆಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಇದೀಗ ಪುಟ್ಟ ಕಂದಮ್ಮ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

ಘಟನೆ ಸಂಬಂಧ ಕುಟುಂಬಸ್ಥರು ಪಾಪಿ ತಂದೆ ಶಂಭುಲಿಂಗಯ್ಯನ ವಿರುದ್ಧ ದೂರು ನೀಡಿದ್ದು, ಗರಗ ಠಾಣೆ ಪೆÇಲೀಸರು ಶಂಭುಲಿಂಗಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಧಾರವಾಡ ಗರಗ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article