ದೀನದಲಿತರ ಅಭಿಮಾನ, ಸ್ವಾಭಿಮಾನದ ಸಂಕೇತ ಜಗಜೀವನ್‌ ರಾಂ: ಸಿಎಂ

Public TV
1 Min Read

ಬೆಂಗಳೂರು: ಡಾ. ಬಾಬೂ ಜಗಜೀವನ್‌ ರಾಂ ಅವರು ದೀನದಲಿತರ ಅಭಿಮಾನ, ಸ್ವಾಭಿಮಾನದ ಸಂಕೇತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಿಸಿದರು.

ಬಾಬು ಜಗಜೀವನ್ ರಾಂ ಅವರ 115ನೇ ಜನ್ಮದಿನಾಚಾರಣೆ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಜಗಜೀವನ್ ರಾಂ ಅವರದ್ದು ಅಪರೂಪದ ನಾಯಕತ್ವ ಹಾಗೂ ವ್ಯಕ್ತಿತ್ವ. ಬಿಹಾರದ ಕಡುಬಡತನದ ಮನೆತನದಲ್ಲಿ ಹುಟ್ಟಿ, ಬಹಳಷ್ಟು ಅವಮಾನ, ಅಪಮಾನಗಳನ್ನು ಸಹಿಸಿಕೊಂಡು ಬೆಳೆದ ಅವರು ಮುಂದೆ ಭಾರತನ ಉಪಪ್ರಧಾನಿಯಾಗಿ ಹೆಮ್ಮೆಯೆನಿಸಿದರು ಎಂದು ನೆನೆದರು. ಇದನ್ನೂ ಓದಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ತೆಲಂಗಾಣ ಆಫರ್ – ಬಿಜೆಪಿ ನಾಯಕರು ಕಿಡಿ

ನೋವುಂಡರೂ ಅಧಿಕಾರಕ್ಕೆ ಬಂದಾಗ ಸಮಗ್ರ ಭಾರತದ ಕಲ್ಪನೆಯೊಂದಿಗೆ ಕೆಲಸ ಮಾಡಿದರು. ಅವರಿಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಸ್ವಾತಂತ್ರ್ಯಪೂರ್ವದ ನಾಯಕ ಎಂದು ಬಣ್ಣಿಸಿದರು.

ದೀನದಲಿತರ ಧ್ವನಿಯಾಗಿ ಅವರಿಗೆ ನ್ಯಾಯ ಒದಗಿಸಲು ಬಾಬು ಜಗಜೀವನ್‌ ರಾಂ ಅವರು ಪಟ್ಟ ಪರಿಶ್ರಮ ದೊಡ್ಡದು. ದೀನದಲಿತರ ಅಭಿಮಾನ, ಸ್ವಾಭಿಮಾನದ ಸಂಕೇತವಾಗಿದ್ದಾರೆ. ಕೃಷಿ ಸಚಿವರಾಗಿ ಅವರು ಮಾಡಿದ ಹಸಿರು ಕ್ರಾಂತಿ ಭಾರತ ದೇಶವನ್ನು ಸ್ವಾಭಿಮಾನಿ ರಾಷ್ಟ್ರವನ್ನಾಗಿ ಬೆಳೆಸಿದೆ. ವಿಜ್ಞಾನದಿಂದ ಹಸಿರು ಕ್ರಾಂತಿಯಾಗಿ ಆಹಾರ ಉತ್ಪಾದನೆಯಲ್ಲಿ ನಮ್ಮದು ಸ್ವಾವಲಂಬಿ ದೇಶವಾಗಿದೆ. ಅದಕ್ಕೆ ಜಗಜೀವನ್ ರಾಂ ಅವರೇ ಕಾರಣೀಭೂತರು ಎಂದು ಹೇಳಿದರು. ಇದನ್ನೂ ಓದಿ: ಕುಮಾರಸ್ವಾಮಿ ಹೀಗೆ ಮಾತನಾಡಿದ್ರೆ ಹಿಟ್ ವಿಕೆಟ್ ಆಗ್ತೀರಾ: ಆರ್.ಅಶೋಕ್ ತಿರುಗೇಟು

ರಕ್ಷಣಾ ಮಂತ್ರಿಯಾಗಿ ರಾಷ್ಟ್ರದ ಸುರಕ್ಷತೆಗಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿಯೂ ಪ್ರಸಿದ್ದಿ ಪಡೆದಿದ್ದರು. ಅವರ ವಿಚಾರಗಳು ನಮಗೆ ಪ್ರೇರಣೆ. ಅವರ ತತ್ವ ಆದರ್ಶಗಳನ್ನು ಇಟ್ಟುಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹೆಚ್ಚಿನ ಅವಕಾಶಗಳನ್ನು ನೀಡುವ ಮೂಲಕ ಜಗಜೀವನ್ ರಾಂ ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇವೆ. ಅವರ ಜನ್ಮದಿನವನ್ನು ದಲಿತರ ಪ್ರೇರಣಾ ದಿನ ಎಂದು ಭಾವಿಸಿ ನಾವು ಕೆಲಸ ಮಾಡಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *