ಬಾಬ್ರಿ ಮಸೀದಿ ವಿವಾದ: ಅಡ್ವಾಣಿ ಸೇರಿ ಹಲವು ನಾಯಕರನ್ನು ಖುಲಾಸೆಗೊಳಿಸಿದ್ದ ಅರ್ಜಿ ಆ.1ಕ್ಕೆ ವಿಚಾರಣೆ

Public TV
1 Min Read

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಸೇರಿದಂತೆ ಹಲವು ನಾಯಕರನ್ನು ಖುಲಾಸೆಗೊಳಿಸಿ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಆದರೆ ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ಅರ್ಜಿ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಆಗಸ್ಟ್ 1ರಂದು ನಡೆಸಲಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಬಿಜೆಪಿ ನಾಯಕರಾದ ಮುರುಳಿ ಮನೋಹರ್ ಜೋಶಿ, ಉಮಾ ಭಾರತಿ ಮತ್ತು ಇತರ ಹಲವು ನಾಯಕರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿತ್ತು. ಇದನ್ನೂ ಓದಿ: ಬಾಬ್ರಿ ಮಸೀದಿ ಧ್ವಂಸ ಆಕಸ್ಮಿಕ ಘಟನೆ – ಎಲ್ಲ ಆರೋಪಿಗಳು ಖುಲಾಸೆ

ಆಗಸ್ಟ್ 1ರಂದು ಮೇಲ್ಮನವಿ ವಿಚಾರಣೆಗೆ ನಿಗದಿಪಡಿಸುವಂತೆ ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರ ನೇತೃತ್ವದ ಏಕಸದಸ್ಯ ಪೀಠವು ಆರಂಭದಲ್ಲಿ ಆದೇಶ ಮಾಡಿತ್ತು. ಆಗಸ್ಟ್ 1ರಂದು ಈ ಮೇಲ್ಮನವಿಯನ್ನು ಮೊದಲ 10 ಪ್ರಕರಣಗಳಲ್ಲಿ ಒಂದಾಗಿ ಪಟ್ಟಿ ಮಾಡಿ ಎಂದು ನ್ಯಾಯಾಲಯ ನಿರ್ದೇಶಿಸಿತ್ತು.

ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲು ಪಿತೂರಿ ನಡೆಸಲಾಗಿತ್ತು ಎಂದು ತೋರಿಸಲು ಯಾವುದೇ ದಾಖಲೆಗಳು ಇಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯವು 2020ರಲ್ಲಿ ನೀಡಿದ್ದ ತೀರ್ಪನ್ನು ಅಯೋಧ್ಯೆಯ ನಿವಾಸಿಗಳಾದ ಹಾಜಿ ಮಹಬೂಬ್ ಅಹಮದ್ ಮತ್ತು ಸಯ್ಯದ್ ಅಖ್ಲಾಖ್ ಅಹಮದ್ ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಾಬ್ರಿ ಮಸೀದಿ ಇತ್ತು, ಮುಂದೆಯೂ ಇರಲಿದೆ: ಭೂಮಿ ಪೂಜೆಗೂ ಮುನ್ನ ಓವೈಸಿ ಟ್ವೀಟ್

ತಾವು ಐತಿಹಾಸಿಕ ಧಾರ್ಮಿಕ ಸ್ಥಳವಾದ ಬಾಬ್ರಿ ಮಸೀದಿ ಧ್ವಂಸದ ಸಂತ್ರಸ್ತರಾಗಿದ್ದು, ಆ ಘಟನೆಗೆ ಸಾಕ್ಷಿಗಳಾಗಿದ್ದೇವೆ. ಆ ಸಂದರ್ಭದಲ್ಲಿ ನಡೆದ ದೊಂಬಿ ಗಲಭೆಗಳಿಂದ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ ಎಂದು ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

2021ರಲ್ಲೇ ಪರಿಷ್ಕರಣಾ ಮನವಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಸಯ್ಯದ್ ಫರ್ಮಾನ್ ಅಲಿ ನಖ್ವಿ ಅವರು ಪೀಠಕ್ಕೆ ತಿಳಿಸಿದರು. ಸಿಆರ್‌ಪಿಸಿ ಸೆಕ್ಷನ್ 372ಗೆ ತಿದ್ದುಪಡಿಯಾಗಿರುವುದರಿಂದ ಅರ್ಜಿಯನ್ನು ಮೇಲ್ಮನವಿಯಾಗಿ ಪರಿಗಣಿಸುವಂತೆ ಕೋರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *