ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಕೃತ್ಯದ ಬಳಿಕ ಭದ್ರತಾ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಆರೋಪಿಗಳು

Public TV
1 Min Read

ಮುಂಬೈ: ಮಹಾರಾಷ್ಟ್ರದ (Maharashtra) ಮಾಜಿ ಸಚಿವ ಬಾಬಾ ಸಿದ್ದಿಕಿ (Baba Siddique) ಹತ್ಯೆ ಆರೋಪಿಗಳು ಕೃತ್ಯದ ಬಳಿಕ ಪರಾರಿಯಾಗಲು ಭದ್ರತಾ ಸಿಬ್ಬಂದಿಯ ಮೇಲೆ ಖಾರದ ಪುಡಿ ಎರಚಿದ್ದರು ಎಂದು ಪೊಲೀಸ್‌ (Police) ಮೂಲಗಳು ತಿಳಿಸಿವೆ.

ಪ್ರಮುಖ ಆರೋಪಿ ಗೌತಮ್ ಬಂಧನದಿಂದ ತಪ್ಪಿಸಿಕೊಳ್ಳಲು ಬಾಬಾ ಸಿದ್ದಿಕಿಯವರ ಕಾವಲಿಗಿದ್ದ ಭದ್ರತಾ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂವರು ಆರೋಪಿಗಳು ತಮ್ಮೊಂದಿಗೆ ಖಾರದ ಪುಡಿ ಕೊಂಡೊಯ್ದಿದ್ದರು. ಸಿದ್ದಿಕಿಯವರ ಮೇಲೆ ಗುಂಡಿನ ದಾಳಿ ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳಲು ಖಾರದ ಪುಡಿಯನ್ನು ಭದ್ರತಾ ಸಿಬ್ಬಂದಿ ಮೇಲೆ ಎರಚಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಆಪ್ತ ಬಾಬಾ ಸಿದ್ದಿಕ್ ಅವರನ್ನು ಶನಿವಾರ ಮುಂಬೈನ ಬಾಂದ್ರಾದಲ್ಲಿರುವ ಅವರ ಶಾಸಕ ಪುತ್ರ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಬಂಧಿತರನ್ನು ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ (23) ಮತ್ತು ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಮತ್ತು ಪುಣೆಯ ಪ್ರವೀಣ್ ಲೋಂಕರ್ (28) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Share This Article