ಕೊರೊನಾಗೆ ಪತಂಜಲಿ ಮದ್ದು – ಬಾಬಾ ರಾಮ್‍ದೇವ್ ಹೇಳಿಕೆಗೆ ವೈದ್ಯರು ಗರಂ

Public TV
2 Min Read

ನವದೆಹಲಿ: ವಿಶ್ವಾದ್ಯಂತ ತನ್ನ ಕರಿನೆರಳು ಬೀರಿ ರಣಕೇಕೆ ಹಾಕುತ್ತಿರುವ ಕಿಲ್ಲರ್ ಕೊರೊನಾ ವೈರಸ್‍ಗೆ 8 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿಯಾಗಿದ್ದಾರೆ. ಆದರೆ ಕೊರೊನಾ ನಿವಾರಿಸಲು ಪತಂಜಲಿ ಸಂಸ್ಥೆಯ ಬಳಿ ಔಷಧಿ ಇದೆ ಎಂದು ಮಾತನಾಡಿ ಖ್ಯಾತ ಯೋಗ ಗುರು ಬಾಬಾ ರಾಮ್‍ದೇವ್ ವೈದ್ಯರ ಸಿಟ್ಟಿಗೆ ಕಾರಣವಾಗಿದ್ದಾರೆ.

ಕಳೆದ ಹಲವು ತಿಂಗಳಿಂದ ಜಗತ್ತಿನ ಸುಮಾರು 173ಕ್ಕೂ ಅಧಿಕ ರಾಷ್ಟ್ರಗಳು, ಪ್ರಾಂತ್ಯಕ್ಕೆ ಕೊರೊನಾ ತಲೆನೋವಾಗಿದೆ. ಕೊರೊನಾ ವೈರಸ್ ರೋಗಕ್ಕೆ ಔಷಧಿ ಕಂಡುಹಿಡಿಯಲು ವಿಶ್ವಾದ್ಯಂತ ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದು, ಸೂಕ್ತ ಔಷಧಿಗಾಗಿ ವೈದ್ಯರು ಪರದಾಡುತ್ತಿದ್ದಾರೆ. ಈ ಮಧ್ಯೆ ಯೋಗ ಗುರು ಬಾಬಾ ರಾಮದೇವ್ ಅವರು ಕೊರೊನಾ ರೋಗಕ್ಕೆ ಆಯುರ್ವೇದದಲ್ಲಿ ಮದ್ದಿದೆ ಎಂದು ಹೇಳಿದ ಮಾತು ಭಾರಿ ಚರ್ಚೆಗೆ ಕಾರಣವಾಗಿದೆ.

ಪತಂಜಲಿ ಸಂಸ್ಥೆಯ ಅಶ್ವಗಂಧ ಉತ್ಪನ್ನದ ಜಾಹಿರಾತಿನಲ್ಲಿ ಮಾತನಾಡಿರುವ ಬಾಬಾ, ಕೊರೊನಾ ವೈರಸ್ ಸೇರಿದಂತೆ ವಿವಿಧ ಮಾರಣಾಂತಿಕ ವೈರಸ್‍ಗಳಿಗೆ ಆಯುರ್ವೇದದಲ್ಲಿ ಔಷಧವಿದೆ ಎಂದಿದ್ದಾರೆ. ಕೊರೊನಾ ಸೋಂಕಿಗೆ ಅಶ್ವಗಂಧ ಮದ್ದು ಎಂಬುದು ವೈಜ್ಞಾನಿಕ ಸಂಶೋಧನೆಯಲ್ಲಿ ಸಾಬೀತಾಗಿದೆ. ಅಶ್ವಗಂಧ ಮಾನವನ ಪ್ರೋಟಿನ್ ಜೊತೆ ಕೊರೊನಾ ಪ್ರೋಟಿನ್ ಸಮ್ಮಿಲನಗೊಳ್ಳದಂತೆ ಕೆಲಸ ಮಾಡುತ್ತದೆ ಎಂದು ಹೇಳಿಕೊಂಡಿದ್ದರು.

ಅಷ್ಟೇ ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಮಾಡಿ ಎಂದು ಬಾಬಾ ರಾಮ್‍ದೇವ್ ಸಲಹೆ ನೀಡಿದ್ದಾರೆ. #YogaForCorona ಎಂದು ಹ್ಯಾಷ್‍ಟ್ಯಾಗ್ ಹಾಕಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಬಾಬಾ ರಾಮ್‍ದೇವ್ ಅವರ ಹೇಳಿಕೆ ವೈದ್ಯರ ಕೆಂಗಣ್ಣಿಗೆ ಕಾರಣವಾಗಿದ್ದು, ಇಂಥಹ ಹೇಳಿಕೆಗಳು ಜನರಲ್ಲಿ ನಕಲಿ ಭದ್ರತಾ ಭಾವನೆ ಸೃಷ್ಟಿಸುತ್ತದೆ. ಹೆಚ್ಚು ಶಿಕ್ಷಿತರಲ್ಲದ ಜನರು ಇಂಥ ಜಾಹೀರಾತುಗಳನ್ನು ನಂಬುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈ ರೀತಿ ಜಾಹೀರಾತುಗಳನ್ನು ಸರ್ಕಾರ ನಿಷೇಧಿಸಬೇಕು ಎಂದು ಕೆಲ ವೈದ್ಯರು ಕಿಡಿಕಾರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಆಯುಶ್ ಇಲಾಖೆಯ ಸಲಹೆಗಾರ ಮನೋಜ್ ನೇಸರಿ ಅವರು, ಪತಂಜಲಿ ಸಂಸ್ಥೆಯ ಉತ್ಪನ್ನಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಆದರೆ, ಕೊರೊನಾ ಸೋಂಕು ನಿಗ್ರಹ ಸಾಧ್ಯವೆಂಬ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಯಾರಾದರು ದೂರು ಕೊಟ್ಟರೆ ಪರಿಶೀಲಿಸಲಾಗುತ್ತೆ ಎಂದಿದ್ದಾರೆ.

ಒಟ್ಟು 173 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 2,18,455 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,245 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 8,938 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 85,664 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,23,853 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 169 ಮಂದಿ ತುತ್ತಾಗಿದ್ದು, 14 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 152 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು 14 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನೆರೆಯ ಮಹಾರಾಷ್ಟ್ರದಲ್ಲಿ ಬುಧವಾರದವರೆಗೆ 44 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *