ಬಿ.ಎಸ್ಸಿ ಅಗ್ರಿ, ವೆಟರ್ನರಿ ಹೊಸ ಕಾಲೇಜು ಆರಂಭ ಆಪ್ಷನ್ ಎಂಟ್ರಿಗೆ ನ.12ರವರೆಗೆ ಅವಕಾಶ – ಕೆಇಎ

Public TV
2 Min Read

ಬೆಂಗಳೂರು: ಬಿ.ಎಸ್ಸಿ ಕೃಷಿ ಮತ್ತು ಪಶು ವೈದ್ಯಕೀಯ ಕೋರ್ಸುಗಳಿಗೆ ಹೊಸದಾಗಿ 120ಕ್ಕೂ ಹೆಚ್ಚು ಸೀಟು ಲಭ್ಯವಿರುವುದರಿಂದ, ಆಸಕ್ತ ಅರ್ಹ ವಿದ್ಯಾರ್ಥಿಗಳಿಗೆ ಆಪ್ಷನ್ ಎಂಟ್ರಿ ದಾಖಲಿಸಲು ನ.12ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾತನಾಡಿ, ಬಿಎಸ್ಸಿ ಅಗ್ರಿಕಲ್ಚರ್‌ಗೆ ಹೊಸದಾಗಿ 72 ಸೀಟುಗಳು ಹಾಗೂ ವೆಟರ್ನರಿ ಕೋರ್ಸ್ಗೆ ಸುಮಾರು 50 ಸೀಟುಗಳು ಲಭ್ಯ ಇವೆ. ಅಲ್ಲದೆ ಹಂಚಿಕೆಯಾಗದೆ ಉಳಿದ ಸೀಟುಗಳೂ ಇದ್ದು, ಅವುಗಳನ್ನೂ ಸೇರಿಸಿ ಹಂಚಿಕೆ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ

ರಾಮನಗರ ಜಿಲ್ಲೆಯ ಕನಕಪುರದಲ್ಲಿ ಎಸ್.ಕರಿಯಪ್ಪ ಕೃಷಿ ಕಾಲೇಜು ಹಾಗೂ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಆದಿಚುಂಚನಗಿರಿ ಕೃಷಿ ಕಾಲೇಜು ಹಾಗೂ ಬೆಳಗಾವಿಯ ಅಥಣಿಯಲ್ಲಿ ಬಾಬುರಾವ್ ದೇಶಪಾಂಡೆ ಪಶು ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರ ತೀರ್ಮಾನಿಸಿ, ಸೀಟ್ ಮ್ಯಾಟ್ರಿಕ್ಸ್ ಕೊಟ್ಟಿದೆ. ಆ ಪ್ರಕಾರ ಸೀಟು ಹಂಚಿಕೆ ಮಾಡಲಾಗುವುದು ಎಂದು ವಿವರಿಸಿದರು.

ಪ್ರಾಧಿಕಾರದಿಂದ ಯಾವುದೇ ಕೋರ್ಸಿಗೆ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಮಾತ್ರ ಈ ಸುತ್ತಿನಲ್ಲಿ ಭಾಗವಹಿಸಬಹುದು. ಕಾಲೇಜುವಾರು, ಕೋರ್ಸುವಾರು ಮತ್ತು ಪ್ರವರ್ಗವಾರು ಸೀಟ್ ಮ್ಯಾಟ್ರಿಕ್ಸ್‌ನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಆಪ್ಷನ್ ಎಂಟ್ರಿ ಮಾಡಲು ನ.8ರ ಸಂಜೆ 6ರಿಂದ ನ.12ರ ಬೆಳಿಗ್ಗೆ 11ರವರೆಗೆ ಅವಕಾಶವಿರುತ್ತದೆ. ವೆರಿಫಿಕೇಶನ್ ಸ್ಲಿಪ್‌ನ್ನು ನ.11ರ ಸಂಜೆ 4ಕ್ಕೆ ಡೌನ್ಲೋಡ್ ಮಾಡಿಕೊಳ್ಳಬಹುದು. ನ.12ರ ಸಂಜೆ 5ಕ್ಕೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ ಆಗುತ್ತದೆ. ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ನ.13 ಮತ್ತು 14ರಂದು ಅವಕಾಶವಿರುತ್ತದೆ. ಅಭ್ಯರ್ಥಿಗಳು ನ.14ರಂದು ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ವಿವರಿಸಲಾಗಿದೆ.ಇದನ್ನೂ ಓದಿ: ಸಂಡೂರು ಅಖಾಡದಲ್ಲಿ ಪ್ರಚಾರ – 15 ದಿನದಲ್ಲಿ ಸಿದ್ದರಾಮಯ್ಯ ರಾಜೀನಾಮೆ : ಬಿಎಸ್‌ವೈ

ನರ್ಸಿಂಗ್ ಅವಕಾಶ:
ನರ್ಸಿಂಗ್ ಕೋರ್ಸ್‌ಗೆ ಆಪ್ಷನ್ಸ್ ದಾಖಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಯುಜಿ ಆಯುಷ್ ಕೋರ್ಸ್ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಹೊಸದಾಗಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ವಿವರಗಳಿಗೆ ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ತಿಳಿಸಿದ್ದಾರೆ.

Share This Article