ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಬಿ.ಸರೋಜಾದೇವಿ (B.Saroja Devi) ಅವರು ಇಂದು (ಜು.14) ವಿಧಿವಶರಾಗಿದ್ದಾರೆ. ಮಂಗಳವಾರ (ಜು.15) ಚನ್ನಪಟ್ಟಣದ ದಶಾವರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಸರೋಜಾದೇವಿಯವರ ಮಗ ಗೌತಮ್ ಮಾತನಾಡಿ, ನಾಳೆ ಬೆಳಿಗ್ಗೆ 11:30ರವರೆಗೂ ಬೆಂಗಳೂರಿನ ಸ್ವಗೃಹದ ಬಳಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಪಾರ್ಥಿವ ಶರೀರವನ್ನು ಚನ್ನಪಟ್ಟಣಕ್ಕೆ ಕರೆದೊಯ್ಯಲಾಗುವುದು. ಅಲ್ಲಿ ದಶಾವರದ ಕಣ್ವ ಡ್ಯಾಂ ಬಳಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಬಿ.ಸರೋಜಾದೇವಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರಕ್ಕೆ ನೈಜತೆ ತಂದಿದ್ದರು: ಬೊಮ್ಮಾಯಿ
1938ರ ಜ.7ರಂದು ಜನಿಸಿದ್ದ ಸರೋಜಾದೇವಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ನಿಧನರಾದರು.
ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಸಾಧನೆಗೆ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಪುರಸ್ಕರಿಸಿತ್ತು. ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
ಸರೋಜಾದೇವಿ ಅವರು ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್‌ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ದೇವಸುಂದರಿ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಗೃಹಿಣಿ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಸರೋಜಾದೇವಿ ಅವರು ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ಮತ್ತು ಎಂ.ಜಿ. ರಾಮಚಂದ್ರನ್ ಅವರೊಂದಿಗೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರು ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಮತ್ತು ಸುನೀಲ್ ದತ್ ಅವರೊಂದಿಗೆ ನಟಿಸಿದ್ದಾರೆ.ಇದನ್ನೂ ಓದಿ: ಬಿ.ಸರೋಜಾದೇವಿಯವರ ಸಾವಿನಿಂದ ಕಲಾಜಗತ್ತು ಬಡವಾಗಿದೆ – ಸಿಎಂ ಸಂತಾಪ