ಚಿಕ್ಕಬಳ್ಳಾಪುರದಲ್ಲಿಂದು ಘಟಾನುಘಟಿಗಳ ಪ್ರಚಾರ – ಸುಧಾಕರ್ ಪರ ಬಿಎಸ್‍ವೈ, ಜೆಡಿಎಸ್ ಪರ ಹೆಚ್‍ಡಿಕೆ ಮತಬೇಟೆ

Public TV
1 Min Read

ಚಿಕ್ಕಬಳ್ಳಾಪುರ: ಉಪಚುನಾವಣಾ ಅಖಾಡದಲ್ಲಿ ಘಟಾನುಘಟಿ ನಾಯಕರ ಭರ್ಜರಿ ಪ್ರಚಾರ ನಡೆಯಲಿದೆ. ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಸಹ ಒಂದೇ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದು, ಆ ಕ್ಷೇತ್ರದ ಮತದಾರರ ಮನಗೆಲುವುದಕ್ಕೆ ಇಬ್ಬರು ನಾಯಕರು ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದ ಈ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಭದ್ರಕೋಟೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿರುವ ಸುಧಾಕರ್ ಬಿಜೆಪಿ ಪಕ್ಷದಿಂದ ಅಖಾಡಕ್ಕಿಳಿದಿದ್ದು, ಜೆಡಿಎಸ್‍ನಿಂದ ರಾಧಾಕೃಷ್ಣ ಹಾಗೂ ಕಾಂಗ್ರೆಸ್‍ನಿಂದ ಎಂ ಅಂಜಿನಪ್ಪ ಅಖಾಡದಲ್ಲಿದ್ದಾರೆ. ಈಗಾಗಲೇ ಶತಾಯಗತಾಯ ಗೆಲ್ಲಲೆಬೇಕು ಎಂದು ಪಣ ತೊಟ್ಟಿರುವ ಸುಧಾಕರ್, ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರತಿದಿನ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಈಗಾಗಲೇ ಸ್ವತಃ ಸಿಎಂ ಯಡಿಯೂರಪ್ಪ ಸಹ ಎರಡು ಬಾರಿ ಚಿಕ್ಕಬಳ್ಳಾಪುರಕ್ಕೆ ಬಂದು ಸುಧಾಕರ್ ಪರ ಪ್ರಚಾರ ನಡೆಸಿ, ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಸೇರಿದಂತೆ ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿದರು. ಈಗ ಮೂರನೇ ಬಾರಿ ಇಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿರುವ ಸಿಎಂ ಯಡಿಯೂರಪ್ಪ ಮಂಚೇನಹಳ್ಳಿ ಪಟ್ಟಣದಲ್ಲಿ 3 ಗಂಟೆಗೆ ಬೃಹತ್ ರೋಡ್ ಶೋ ನಡೆಸಲಿದ್ದು, ಮಾಜಿ ಸಿಎಂ ಎಸ್.ಎಂ ಕೃಷ್ಣ ಸಹ ಸುಧಾಕರ್ ಪರ ಪ್ರಚಾರ ನಡೆಸಲಿದ್ದಾರೆ.

ಇತ್ತ ಜೆಡಿಎಸ್‍ನಿಂದ ಬೆಳ್ಳಂಬೆಳಗ್ಗೆಯೇ ಚುನಾವಣಾ ಅಖಾಡಕ್ಕೆ ಧುಮಕಲಿರುವ ಎಚ್.ಡಿ ಕುಮಾರಸ್ವಾಮಿ, ಮೊದಲಿಗೆ ನಂದಿ ಗ್ರಾಮದಲ್ಲಿ ಪ್ರಚಾರ ನಡೆಸಿ, ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ನಂತರ ಬಿಜೆಪಿ ಅಭ್ಯರ್ಥಿ ಸುಧಾಕರ್ ಸ್ವಗ್ರಾಮ ಪೇರೇಸಂದ್ರ ಸರ್ಕಲ್‍ನಲ್ಲಿ ಬಹಿರಂಗ ಭಾಷಣ ಮಾಡಿ, ತದನಂತರ ಪ್ರತಿಷ್ಠೆಯ ವಿಷಯವಾಗಿರುವ ಮಂಚೇನಹಳ್ಳಿಗೆ ತೆರಳಲಿದ್ದು, ಅಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಎಚ್.ಡಿ ಕುಮಾರಸ್ವಾಮಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಇಡೀ ದಿನ ಕ್ಷೇತ್ರದ್ಯಾಂತ ಎಚ್‍ಡಿಕೆ ಪ್ರಚಾರ ನಡೆಸಲಿದ್ದಾರೆ.

ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿರುವ ಯಡಿಯೂರಪ್ಪ ಮುಂದೆಯೇ ಮಂಚೇನಹಳ್ಳಿಯಲ್ಲಿ ಶಕ್ತಿ ಪ್ರದರ್ಶನದ ಮೂಲಕ ಭರ್ಜರಿ ಸ್ವಾಗತ ಕೋರಿ ಸನ್ಮಾನಿಸುವುದಕ್ಕೆ ಸುಧಾಕರ್ ಸಿದ್ಧರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *