ಟಿಕೆಟ್ ಕೊಡಲ್ಲ ಅಂತ ಹೈಕಮಾಂಡ್ ಹೇಳಿತ್ತು: ಸದಾನಂದಗೌಡ ನಿವೃತ್ತಿ ಘೋಷಣೆಗೆ ಬಿಎಸ್‌ವೈ ಪ್ರತಿಕ್ರಿಯೆ

Public TV
2 Min Read

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಲ್ಲ ಅಂತ ಹೈಕಮಾಂಡ್ ನೇರವಾಗಿ ತಿಳಿಸಿತ್ತು ಎಂದು ಡಿ.ವಿ.ಸದಾನಂದಗೌಡ ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Yediyurappa) ಪ್ರತಿಕ್ರಿಯೆ ನೀಡಿದರು.

ನಗರದಲ್ಲಿ ಮಾತನಾಡಿದ ಅವರು, ಡಿವಿಎಸ್ (Sadananda Gowda) ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಆದರೆ ಸಕ್ರಿಯ ರಾಜಕೀಯದಲ್ಲಿ ಇರ್ತಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡಲ್ಲ ಅಂತ ಹೈಕಮಾಂಡ್ ನೇರವಾಗಿ ತಿಳಿಸಿತ್ತು. ಅವರು ಚುನಾವಣೆಗೆ ನಿಲ್ಲಲ್ಲ. ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಇರಲು ಹೇಳಿದೆ. ಚುನಾವಣೆಗೆ ನಿಲ್ಲದಂತೆ ಹೈಕಮಾಂಡ್ ನೇರವಾಗಿ ಸೂಚಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಪರೇಷನ್ ಶಾಪಿಂಗ್ ಹಬ್ – ತೆರವು ಖಂಡಿಸಿ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ

ಪಕ್ಷದ ಬಗ್ಗೆ ಎಸ್.ಟಿ.ಸೋಮಶೇಖರ್ ಹೇಳಿಕೆ ಕುರಿತು ಮಾತನಾಡಿ, ಸೋಮಶೇಖರ್ ಬಳಿ ಮಾತಾಡಿದ್ದೇನೆ. ಅವರು ಪಕ್ಷ ಬಿಟ್ಟು ಹೋಗಲ್ಲ. ಅಸಮಾಧಾನ ಇದ್ದರೆ ಮಾತಾಡಿ ಸರಿಪಡಿಸ್ತೇನೆ ಎಂದು ತಿಳಿಸಿದರು.

ಶಾಸಕ ಅಶ್ವಥ್ ನಾರಾಯಣ್ ಮಾತನಾಡಿ, ನಮ್ಮ ಸ್ನೇಹಿತ ಸೋಮಶೇಖರ್ ಯಾವ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಅವರಿಗೆ ಬಿಜೆಪಿ ಎಲ್ಲಾ ಸ್ಥಾನಮಾನ ಕೊಟ್ಟು ಗೌರವಿಸಿದೆ. ಪಕ್ಷ ಅವರನ್ನು ಒಂದು ದಿನವೂ ಕಡೆಗಣಿಸಿಲ್ಲ. ಅವರಿಗೆ ಅಳುಕು ಬೇಡ. ಜಾಮೂನು, ವಿಷ ಎಲ್ಲಾ ಕಾಂಗ್ರೆಸ್‌ನಲ್ಲಿ ಕೊಡೋದು. ಅವರ ಹೆಗಲ ಮೇಲೆ ನಾವು ಯಾವುದೇ ಬಾರ ಹಾಕಿಲ್ಲ. ಸೋಮಶೇಖರ್ ಮೇಲೆ ಅನ್ಯಾಯ ಜರುಗಿಲ್ಲ. ಏನೇ ಮಾತು ಹೇಳಿದರೂ ವಾಪಸ್ ಪಡೆಯಲಿ. ಮನೆಯಲ್ಲೇ ಇದ್ದು ಮನೆ ಯಜಮಾನರ ಬಗ್ಗೆ ಮಾತಾಡೋದು, ವಿರುದ್ಧ ಹೇಳಿಕೆ ನೀಡುವುದು ಸೂಕ್ತವಲ್ಲ. ಅವರ ವ್ಯಕ್ತಿತ್ವಕ್ಕೂ ಸರಿಯಲ್ಲ. ಸೋಮಶೇಖರ್ ಅವರು ಸಿದ್ದರಾಮಯ್ಯ, ಡಿಕೆಶಿ ಮೆಚ್ಚಿಸಲು ಮಾತಾಡ್ತಿದ್ದಾರೆ. ಅವರೇ ಮುಳುಗುತ್ತಿದ್ದಾರೆ. ಯಾಕೆ ಆ ಹಡಗು ಹತ್ತುತ್ತಿದ್ದಾರೆ ಸೋಮಶೇಖರ್ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಚೆಕ್‍ನಲ್ಲಿ 3.5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ – ಅಧಿಕಾರಿ ಅರೆಸ್ಟ್

ಸದಾನಂದಗೌಡರು ಬಹುಕಾಲ ರಾಜಕೀಯದಲ್ಲಿ ಇದ್ದವರು. ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈಗ ಅವರ ಆಲೋಚನೆ ತಿಳಿಸಿದ್ದಾರೆ. ಯಾವ ರೀತಿ ಪಕ್ಷ ಹೇಳುತ್ತೆ ನೋಡೋಣ. ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಪಕ್ಷ ಯಾರನ್ನೂ ಅಗೌರವದಿಂದ ನಡೆಸಿಕೊಳ್ಳಲ್ಲ ಎಂದು ತಿಳಿಸಿದರು.

Share This Article