ರಾಜಾಹುಲಿ ಬರ್ತ್ ಡೇ: ರೈತರಿಗೆ ಉಚಿತ ಟ್ರ್ಯಾಕ್ಟರ್ ಕೊಟ್ಟ ಯಡಿಯೂರಪ್ಪ

Public TV
2 Min Read

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ 79ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಕಾವೇರಿ ನಿವಾಸದಲ್ಲಿ ಇವತ್ತು ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆ ಪುತ್ರಿಯರು, ಸೊಸೆಯಂದಿರು ಆರತಿ ಬೆಳಗಿ ಬಿಎಸ್‍ವೈಗೆ ಶುಭ ಕೋರಿದರು. ಇದೇ ವೇಳೆ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಕೂಡ ಉಪಸ್ಥಿತರಿದ್ದರು. ಬಳಿಕ ಸಂಜಯ ನಗರದ ರಾಧಾಕೃಷ್ಣಾ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಕಾವೇರಿ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು, ಶಾಸಕರು ಭೇಟಿ ನೀಡಿ ಯಡಿಯೂರಪ್ಪ ಅವರಿಗೆ ಶುಭಾಶಯ ಕೋರಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸಿ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

ಇನ್ನು ಇದೇ ವೇಳೆ ವಿವಿಧ ಜಿಲ್ಲೆಗಳ ರೈತರಿಗೆ 25 ಟ್ರ್ಯಾಕ್ಟರ್‍ಗಳನ್ನ ನೀಡುವ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಸಿದ್ಧಗಂಗಾಶ್ರೀಗಳು, ಸಿಎಂ ಅವರ ಸಮ್ಮುಖದಲ್ಲೇ ಯಡಿಯೂರಪ್ಪ ಅವರು ಕೀ ನೀಡುವ ಮೂಲಕ ರೈತರಿಗೆ ಟ್ರ್ಯಾಕ್ಟರ್‍ಗಳನ್ನ ನೀಡಿದ್ದಾರೆ. ಇದಕ್ಕೂ ಮುನ್ನ ಕಾವೇರಿ ನಿವಾಸಕ್ಕೆ ಅಭಿಮಾನಿಗಳು ತಂದಿದ್ದ ದೊಡ್ಡ ಗಾತ್ರದ ಕೇಕ್ ಕತ್ತರಿಸುವ ಮೂಲಕ ಅವರು ಹುಟ್ಟುಹಬ್ಬವನ್ನು ಆಚರಿಸಿದರು. ಇದನ್ನೂ ಓದಿ: ಹಾಲಿ ಸಿಎಂ ಎದುರೇ ಮುಂದಿನ‌ ಸಿಎಂ ವಿಜಯೇಂದ್ರ ಎಂದು ಘೋಷಣೆ ಕೂಗಿದ ಅಭಿಮಾನಿಗಳು

ಇದೇ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪಗೆ ದೂರವಾಣಿ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ ಶುಭಾಶಯ ಕೋರಿದ್ದಾರೆ. ಅವರ ಮಾರ್ಗದರ್ಶನದ ಮೂಲಕ ಮತ್ತೊಮ್ಮೆ 2023 ರಲ್ಲಿ ಬಿಜೆಪಿ ಸರ್ಕಾರ ತರುವ ಸಂಕಲ್ಪದ ದಿನ. ಅವರ ಆಶೀರ್ವಾದದಿಂದ ನಾವೆಲ್ಲ ಮುನ್ನೆಡೆಯುತ್ತೇವೆ ಎಂದರು,

ಇನ್ನೊಂದೆಡೆ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಯಡಿಯೂರಪ್ಪ ಮಾತನಾಡಿ, ಅಧಿಕಾರ ಇಲ್ಲದೆ ಇದ್ದರೂ ಸಹ ಇಷ್ಟೊಂದು ಜನ ಆಶೀರ್ವಾದ ಮಾಡಿದ್ದಾರೆ. ಮತ್ತೊಮ್ಮೆ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ಕಾಂಗ್ರೆಸ್‍ನವರ ಯಾವುದೇ ಬೂಟಾಟಿಕೆ ನಡಿಯುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ತರಲು ಶಕ್ತಿಮೀರಿ ಕೆಲಸ ಮಾಡುತ್ತೇನೆ. ಜನ ಮುಂದಿನ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡುತ್ತಾರೆ. ವಿಧಾನಸಭೆ ಅಧಿವೇಶನ ಬಳಿಕ ರಾಜ್ಯ ಪ್ರವಾಸ ಆರಂಭ ಮಾಡುತ್ತೇನೆ ಅಂತಾ ಘೋಷಿಸಿದರು.

Share This Article
Leave a Comment

Leave a Reply

Your email address will not be published. Required fields are marked *