– ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ತೆಗೆದಾಗ ಬಿಜೆಪಿಯವ್ರು ಎಲ್ಲಿ ಹೋಗಿದ್ರು: ಕಾಂಗ್ರೆಸ್ ನಾಯಕ ಪ್ರಶ್ನೆ
ನವದೆಹಲಿ: ಹೈಕಮಾಂಡ್ ನಿರ್ದೇಶನ ಮೇರೆಗೆ ಕೆ.ಎನ್.ರಾಜಣ್ಣ (K.N.Rajanna) ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿದೆ. ಕೆಲವು ವಿಚಾರಕ್ಕೆ ಪಕ್ಷದಲ್ಲಿ ಶಿಸ್ತು ಮೀರಿ ಹೋದಾಗ ಇಂತಹ ಕ್ರಮ ಆಗುತ್ತವೆ. ಇದು ದುರದೃಷ್ಟಕರ, ಹೀಗೆ ಆಗಬಾರದಿತ್ತು ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (B.K.Hariprasad) ಹೇಳಿದರು.
ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾತನಾಡಿದ ಅವರು, ರಾಜಣ್ಣ ಅವರದ್ದೇ ಆದ ಕೊಡುಗೆ ರಾಜ್ಯಕ್ಕೆ ಇದೆ. ಅವರ ತಪ್ಪುಗಳ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು. ಇದನ್ನೂ ಓದಿ: ಸಚಿವ ಸಂಪುಟದಿಂದ ರಾಜಣ್ಣ ವಜಾ – ಪರಿಷತ್‌ನಲ್ಲಿ ಗದ್ದಲ ಗಲಾಟೆ
ರಾಜಣ್ಣನಿಗೆ ಅನ್ಯಾಯ ಆಗಿದೆ ಎಂದು ಬಿಜೆಪಿ ನಾಯಕರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಪಾಪ ಬಿಜೆಪಿ ಸತ್ಯಹರಿಶ್ಚಂದ್ರರು, ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ತೆಗೆದು ಹಾಕಿದಾಗ ಎಲ್ಲಿ ಹೋಗಿದ್ದರು? ಈ ಸತ್ಯವಂತರು, ಜಗದೀಶ್ ಶೆಟ್ಟರ್, ಬಸನಗೌಡ ಪಾಟೀಲ್ ಯತ್ನಾಳರನ್ನ ಆರು ವರ್ಷ ವಜಾ ಮಾಡಿದಾಗ ಈ ಸತ್ಯವಂತರು ಎಲ್ಲಿ ಹೋಗಿದ್ದರು ಎಂದು ಟಾಂಗ್ ಕೊಟ್ಟರು.
ರಾಜೀನಾಮೆ ಹಿಂದೆ ಷಡ್ಯಂತ್ರ ಇದೆ ಎಂದು ರಾಜಣ್ಣ ಹೇಳಿದ್ದಾರೆ. ರಾಜಕೀಯದಲ್ಲಿ ಷಡ್ಯಂತ್ರ ಇರೋದು ಸಹಜ. ಅದನ್ನೆಲ್ಲ ಹೆದರಿಸಬೇಕು. ಅವರು ಸುಮ್ಮನೆ ಕೂರುವ ವ್ಯಕ್ತಿ ಅಲ್ಲ. ನಿಷ್ಠುರವಾದ ವ್ಯಕ್ತಿ, ಮುಂದೆ ಕುಳಿತು ಮಾತಾಡಿ ಸರಿ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಕೆಲವು ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಅಂತಿಮ. ಮುಂದೆ ಹೀಗಾಗಬಾರದು ಎನ್ನುವುದಕ್ಕೆ ಇದು ಎಚ್ಚರಿಕೆ ಗಂಟೆ. ಇದು ಶಾಸಕರಿಗೂ ಸಚಿವರಿಗೂ ಎಲ್ಲರಿಗೂ ಅನ್ವಯಿಸಲಿದೆ ಎಂದರು. ಇದನ್ನೂ ಓದಿ: ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಹಗೆ ಸಾಧಿಸ್ತಾರೆ ಎಚ್ಚರಿಕೆಯಿಂದ ಇರಬೇಕು: ಸತೀಶ್ ಜಾರಕಿಹೊಳಿ
ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಹೋರಾಟ ವಿಚಾರವಾಗಿ ಮಾತನಾಡಿ, ಕಾನೂನು ತನ್ನ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಬಿಜೆಪಿಯವರು ನಿರುದ್ಯೋಗಿಗಳಾಗಿದ್ದಾರೆ. ಇದರಲ್ಲಿ ಅವರು ಉದ್ಯೋಗವನ್ನ ಹುಡುಕುತ್ತಿದ್ದಾರೆ. ಆರೋಪ ಬಂದಿದೆ. ತನಿಖೆ ನಡೆಯುತ್ತಿದೆ. ಎಸ್‌ಐಟಿ ತನ್ನ ತನಿಖೆಯನ್ನ ತ್ವರಿತವಾಗಿ ಮುಗಿಸಬೇಕು. ಸರ್ಕಾರ ನಿರ್ದಿಷ್ಟ ಕಾಲಮಿತಿ ನೀಡಬೇಕು. ಧರ್ಮಸ್ಥಳ ಕ್ಷೇತ್ರಕ್ಕೆ ಕೆಟ್ಟ ಹೆಸರು ಅಪನಂಬಿಕೆ ಬರಬಾರದು ಎಂದು ಹೇಳಿದರು.