ಸಂಸ್ಕೃತ ಭಾಷೆಯ ಮೇಲಿನ ಮಮತೆಯನ್ನು ತುಳು, ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ.ಕೆ. ಹರಿಪ್ರಸಾದ್

Public TV
2 Min Read

ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯದ ಕೇವಲ 24,821 ಸಂಸ್ಕೃತ ಭಾಷಿಗರ ಮೇಲೆ ತೋರಿಸುತ್ತಿರುವ ಅಗಾಧ ಮಮತೆಯನ್ನು ನಮ್ಮ ರಾಜ್ಯದಲ್ಲಿ ಮೂಲೆ ಗುಂಪಾಗಿರುವ ತುಳು ಮತ್ತು ಕೊಡವ ಭಾಷೆಗಳ ಮೇಲೆ ತೋರಿಸಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿರುವ ಒಟ್ಟು ತುಳುವರ ಸಂಖ್ಯೆ 18,46,427 ಹಾಗೆಯೇ ಕೊಡವ ಭಾಷೆಯನ್ನಾಡುವವರ ಸಂಖ್ಯೆ 1,13,857. ಆದರೆ, ಸಂಸ್ಕೃತ ಭಾಷೆಯನ್ನು ತಮ್ಮ ಮಾತೃಭಾಷೆಯೆಂದು ದಾಖಲಿಸಿದವರ ಸಂಖ್ಯೆ 24,821 ಮಾತ್ರ. ಇಷ್ಟು ಕಡಿಮೆ ಜನಸಂಖ್ಯೆಯ ಮೇಲೆ ಬಿಜೆಪಿ ಸರ್ಕಾರ ತನ್ನ ಅಗಾಧ ಪ್ರೀತಿಯನ್ನು ತೋರಿಸುತ್ತಾ ಬಂದಿದೆ. ಈಗಾಗಲೇ ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವಿದೆ. ಅದಕ್ಕೆ ಬೇಕಾದಂತಹ ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ತುಳು ಮತ್ತು ಕೊಡವ ಭಾಷೆಗಳ ಅಭಿವೃದ್ದಿಯತ್ತ ಮಾತ್ರ ದಿವ್ಯ ನಿರ್ಲಕ್ಷವನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಆಕ್ಟ್ -1978’ ಸಿನಿಮಾ ಪ್ರೇರಣೆ – ಬ್ಯಾಂಕ್ ಮುಂದೆ ಪ್ರತಿಭಟಿಸಿ ನ್ಯಾಯ ಪಡೆದ ಮಹಿಳೆ

ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಭಾವಿ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಬಂದವು. ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾಗಿವೆ. ದೇಶದಲ್ಲಿ ಹಲವಾರು ರಾಜ್ಯಗಳು ತಮ್ಮ ಒಂದಕ್ಕೂ ಹೆಚ್ಚು ಭಾಷೆಗಳನ್ನು ಅಧಿಕೃತವಾಗಿ ಘೋಷಿಸಿಕೊಂಡಿವೆ. ಆದರೆ ಕರ್ನಾಟಕ ರಾಜ್ಯ ಕನ್ನಡವನ್ನು ಹೊರತುಪಡಿಸಿ ಬೇರೆ ಭಾಷೆಗಳಿಗೆ ಅಧಿಕೃತ ಸ್ಥಾನ ನೀಡಿಲ್ಲ. ಬಹುಜನರು ದಿನನಿತ್ಯ ಉಪಯೋಗಿಸುವ ಕೊಡವ, ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಮಾನ್ಯ ಮಾಡಬಹುದಾಗಿದೆ. ಮಾನ್ಯ ಮಾಡದೇ ಇರುವುದರಿಂದ ಕೇಂದ್ರ ಸರ್ಕಾರ ಸುಲಭವಾಗಿ ನುಣುಚಿಕೊಳ್ಳುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಭಾಷೆಗಳಾದ ತುಳು ಮತ್ತು ಕೊಡವ ಭಾಷೆಗಳನ್ನು ರಾಜ್ಯ ಸರ್ಕಾರ ಮೊದಲು ತನ್ನ ಅಧಿಕೃತ ಭಾಷೆಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ

ಸಂಸ್ಕೃತಕ್ಕೆ ನೀಡುತ್ತಿರುವಷ್ಟೇ ಮಹತ್ವವನ್ನು ನಮ್ಮ ಕನ್ನಡ, ತುಳು ಹಾಗೂ ಕೊಡವ ಭಾಷೆಗೂ ನೀಡುವ ಮೂಲಕ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿಯನ್ನು ಬಿಡಬೇಕು. ಹಾಗೆಯೇ ನಮ್ಮ ಭಾಷೆಗಳ ಅಭಿವೃದ್ದಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನೆಚ್ಚಿನ ಶಿಕ್ಷಕನ ವರ್ಗಾವಣೆ – ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು

Share This Article
Leave a Comment

Leave a Reply

Your email address will not be published. Required fields are marked *