ಉಡುಪಿ: ಒಂಬತ್ತು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ ಶೇಷಾದ್ರಿಯವರು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕೃತಿ ಮೂಕಜ್ಜಿಯ ಕನಸನ್ನು ಚಲನಚಿತ್ರ ಮಾಡಲು ಹೊರಟಿದ್ದಾರೆ. ಖ್ಯಾತ ರಂಗಭೂಮಿ ಕಲಾವಿದೆ, ಬೆಳ್ಳಿ ತೆರೆಯ ಮನೋಜ್ಞ ನಟಿ ಬಿ. ಜಯಶ್ರೀ ಮೂಕಜ್ಜಿಯಾಗಿ ಕಥೆಗೆ ಜೀವ ತುಂಬಲಿದ್ದಾರೆ.
`ಕಡಲ ತಡಿಯ ಭಾರ್ಗವ’ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೋಟ ಶಿವರಾಮ ಕಾರಂತರ 116ನೇ ಜನ್ಮದಿನ ಸಂದರ್ಭ ಅವರ ಕಾದಂಬರಿ ಚಲನಚಿತ್ರವಾಗುತ್ತಿದೆ. 50 ವರ್ಷದ ಹಿಂದೆ ಬರೆದ ಕಾರಂತರ ಕೃತಿಗೆ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿಯೂ ಸಿಕ್ಕಿತ್ತು. ಮೂಕಜ್ಜಿಯ ಕನಸು ಕಾದಂಬರಿ ಇದೀಗ ತೆರೆಯ ಮೇಲೆ ಬರಲಿದೆ. ರಾಷ್ಟ್ರಪ್ರಶಸ್ತಿಯನ್ನು 9 ಬಾರಿ ಮುಡಿಗೇರಿಸಿಕೊಂಡ ಪಿ.ಶೇಷಾದ್ರಿ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಶಿವರಾಮ ಕಾರಂತರ ಹುಟ್ಟು ಹಬ್ಬದ ದಿನದಂದೇ ಮೂಕಜ್ಜಿಯ ಕನಸುಗಳು ಉಡುಪಿ ಜಿಲ್ಲೆ ಬ್ರಹ್ಮಾವರದ ಸಾಲಿಕೇರಿಯಲ್ಲಿ ಮುಹೂರ್ತ ಕಂಡಿದೆ.
ಮೂಕಜ್ಜಿ ಪಾತ್ರಕ್ಕೆ ಸಾಕಷ್ಟು ಹುಡುಕಾಟ ನಡೆಸಿದ್ದ ನಿರ್ದೇಶಕರು 15 ದಿನಗಳ ಕಾಲ ಅಲ್ಲಲ್ಲಿ ಸ್ಕ್ರೀನ್ ಟೆಸ್ಟ್ ಮಾಡಿದ್ದರು. ಆದರೆ ಆಯ್ಕೆಗೂ ಮೊದಲೇ ಮನಸ್ಸಿನಲ್ಲಿ ಆಯ್ಕೆ ಮಾಡಿದ್ದ ಕೊನೆಗೆ ಫೈನಲ್ ಮಾಡಿದ್ದಾರೆ. ಹಿರಿಯ ನಟಿ ಬಿ ಜಯಶ್ರೀ ಮೂಕಜ್ಜಿಯಾಗಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿ. ಜಯಶ್ರೀ ಅವರು, ನಾನು ಮೂಕಜ್ಜಿ, ನಾನು ಮೂಖವಾಗಿದ್ದೇನೆ. ನಾಟಕಕ್ಕೂ ಚಿತ್ರಕ್ಕೂ ಬಹಳ ವ್ಯತ್ಯಾಸವಿದೆ. ರೈಲ್ವೇ ಹಳಿಗಳ ತರ. ಎಲ್ಲೋ ಒಂದು ಕರೆ ಅದು ಕೂಡುತ್ತದೆ. ಹಳಿಗಳು ಕೂಡದಿದ್ದರೂ ಅದು ಕೂಡಿಯೇ ಕೂಡುತ್ತದೆ ಎಂದರು.
ಕಥೆಗೆ ಚ್ಯುತಿ ಬಾರದಂತೆ, ಪ್ರಸ್ತುತತೆಗೆ ಹೊಂದುವಂತೆ ಚಿತ್ರವನ್ನು ಶೇಷಾದ್ರಿ ಹೆಣೆದಿದ್ದಾರಂತೆ. ಡಾ ಶಿವರಾಮ ಕಾರಂತರ ಕೃತಿಗಳ ವಾರಸುಧಾರರಾದ ಮಾಲಿನಿ ಮಲ್ಯ ಅವರೊಂದಿಗೆ ಚಿತ್ರಕತೆಯ ಚರ್ಚೆ ನಡೆಸಿ ಚಿತ್ರ ಮಾಡಲು ಹೊರಟಿದ್ದಾರೆ. ಮಹೂರ್ತದ ದಿನ ಅವರು ಜೊತೆಗಿದ್ದು ಚಿತ್ರಕ್ಕೆ ಶುಭ ಹಾರೈಸಿದರು. ಸುಮಾರು ಐದು ವರ್ಷದಿಂದ ಮೂಕಜ್ಜಿಯನ್ನು ಬೆಳ್ಳಿ ತೆರೆಗೆ ತರುವ ಕನಸು ಇಟ್ಟುಕೊಂಡಿದ್ದರು. ಕಾರಂತರ ಜನ್ಮದಿನದಂದೇ ಚಿತ್ರೀಕರಣ ಶುರುವಾಗಿದೆ. 25 ದಿನಗಳ ಒಂದೇ ಶೆಡ್ಯೂಲ್‍ನಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಸುಮಾರು 70 ಲಕ್ಷ ರೂ. ಹೂಡಿಕೆ ಮಾಡಿ ಚಿತ್ರವನ್ನು ಕಟ್ಟಲಿದ್ದಾರೆ. ಮುಂದಿನ ವರ್ಷ ಜನವರಿಗೆ ಚಿತ್ರ ತೆರೆ ಕಾಣಲಿದೆ. ಕಲಾವಿದರು, ಭಾಷೆ ಎಲ್ಲದ ಬಗ್ಗೆ ಸಿಕ್ಕಾಪಟ್ಟೆ ಹೋಂ ವರ್ಕ್ ಮಾಡಿಕೊಂಡು ಪಿ. ಶೇಷಾದ್ರಿ ಮಾನಿಟರ್ ಮುಂದೆ ಕುಳಿತುಕೊಂಡಿದ್ದರು.
ಶಿವರಾಮ ಕಾರಂತರ ಬೆಟ್ಟದ ಜೀವ, ಚಿಗುರಿದ ಕನಸು, ಚೋಮನ ದುಡಿ, ಸರಸಮ್ಮನ ಸಮಾಧಿ ಕಾದಂಬರಿಗಳು ಈಗಾಗಲೇ ಚಿತ್ರವಾಗಿ ಯಶಸ್ವಿಯಾಗಿದೆ. ಚಿತ್ರಕ್ಕೆ ಪ್ರವೀಣ್ ಗೋಡ್ಕಿಂಡಿ ಸಂಗೀತ ನೀಡಲಿದ್ದಾರೆ. ಚಿಗುರಿದ ಕನಸು, ಗುಡ್ಡದ ಭೂತಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದ ಜಿ. ಎಸ್ ಭಾಸ್ಕರ್ 8ಕೆ ಡ್ರ್ಯಾಗನ್ ಕ್ಯಾಮೆರಾ ಮೂಲಕ ಮೂಕಜ್ಜಿಯನ್ನು ಸೆರೆ ಹಿಡಿಯಲಿದ್ದಾರೆ. ಕರಾವಳಿಯ ಬಿಸಿಲಿನಲ್ಲಿ ಕೆಲಸ ಮಾಡೋದು ಸವಾಲು. ಈ ಹಿಂದೆಯೂ ಈ ಭಾಗದಲ್ಲಿ ನಾನು ಚಿತ್ರೀಕರಣ ಮಾಡಿದ್ದೇನೆ. ನಿರ್ದೇಶಕರ ಆಶಯ ಮತ್ತು ದೃಷ್ಟಿಕೋನದಲ್ಲಿ ಮೂಕಜ್ಜಿಯ ಕನಸನ್ನು ಕಟ್ಟಲಿದ್ದೇವೆ ಅಂತ ಹಿರಿಯ ಛಾಯಾಗ್ರಾಹಕ ಜಿ. ಎಸ್ ಭಾಸ್ಕರ್ ಹೇಳಿದರು.
ಮೂಕಜ್ಜಿಯ ಕನಸು 60 ರ ದಶಕದ ಕಥೆ. ಆ ಕಥೆಯನ್ನು ಈಗಿನ ಪ್ರಸ್ತುತ ಪರಿಸ್ಥಿತಿಗೆ ತರುವುದು ಒಂದು ಲೆಕ್ಕದಲ್ಲಿ ನಿರ್ದೇಶಕರಿಗೆ ಚಾಲೆಂಜ್. ಕಾದಂಬರಿಗಳಿಗೆ ಓದುಗರ ಕೊರತೆಯಿದೆ, ಆದರೆ ನೋಡುಗರು ಹೆಚ್ಚಾಗಿರುವ ಈ ಸನ್ನಿವೇಶದಲ್ಲಿ ಮೂಕಜ್ಜಿಯ ಕನಸು ಜನಕ್ಕೆ ತಲುಪಿಸಲು ಹೊರಟಿದ್ದಾರೆ ಪಿ. ಶೇಷಾದ್ರಿ. ವಾರಕ್ಕೆ ನಾಲ್ಕು ತೆರೆಕಾಣುವ ಕಮರ್ಷಿಯಲ್ ಚಿತ್ರದ ನಡುವೆ ಕಾರಂತರ ಮೂಕಜ್ಜಿಯ ಕನಸುಗಳು ಸಕ್ಸಸ್ ಆಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv