– ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದ ಪದವೀಧರೆ ಮೇಲೆ ಹರಿದ ಟಿಪ್ಪರ್ ಲಾರಿ
ಬೆಂಗಳೂರು: ರಸ್ತೆ ಗುಂಡಿಗಳನ್ನ ಮುಚ್ಚುವ ಬಗ್ಗೆ ಸಿಎಂ ಡಿಸಿಎಂ ತಾಕೀತು ಮಾಡಿದ್ರೂ ಇನ್ನೂ ರಸ್ತೆಗಳಲ್ಲಿ ಗುಂಡಿಗಳು ಮಾಯವಾಗಿಲ್ಲ. ಇದೀಗ ಬೆಂಗಳೂರು ಹೊರ ವಲಯದಲ್ಲಿ ರಸ್ತೆ ಗುಂಡಿಗೆ ಪದವೀಧರೆ ಬಲಿಯಾಗಿದ್ದಾಳೆ.
ಧನುಶ್ರೀ (21) ರಸ್ತೆ ಗುಂಡಿಗೆ ಬಿದ್ದು ಸಾವನ್ನಪ್ಪಿದ ವಿದ್ಯಾರ್ಥಿನಿ. ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದ ಪದವೀಧರೆ ಇಂದು ಬೆಳಗ್ಗೆ ಬೂದಿಗೆರೆ ಕ್ರಾಸ್ ಬಳಿ ಬೆಳಗ್ಗೆ 8.50ರ ಸುಮಾರಿಗೆ ಸ್ಕೂಟರ್ ನಲ್ಲಿ ಬರ್ತಿದ್ದಾಗ ರಸ್ತೆಗುಂಡಿಗೆ ಬಿದ್ದು ಸ್ಕೂಟರ್ ನಿಂದ ಕೆಳಗೆ ಬಿದ್ದಿದ್ದಾಳೆ. ಗುಂಡಿಯಿಂದ ಸ್ಕಿಡ್ ಆಗಿ ಬಿದ್ದ ವಿದ್ಯಾರ್ಥಿನಿ ಮೇಲೆ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪಿದ್ದಾಳೆ.
ನಾರಾಯಣ ಮಠದ ನಿವಾಸಿಯಾದ ಧನುಶ್ರೀ ಖಾಸಗಿ ಕಾಲೇಜಿನಲ್ಲಿ ಬಿಕಾಂ ವ್ಯಾಸಾಂಗ ಮಾಡುತ್ತಿದ್ದಳು. ಬೆಳಗ್ಗೆ ಕಾಲೇಜಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಧನುಶ್ರೀ, ರಸ್ತೆ ಗುಂಡಿ ತಪ್ಪಿಸಲು ಹೋಗಿದ್ದು ಟಿಪ್ಪರ್ ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಬಿದ್ದವಳ ಮೇಲೆ ಟಿಪ್ಪರ್ ಹರಿಸಿ, ಟಿಪ್ಪರ್ ನಿಲ್ಲಿಸದೇ ಚಾಲಕ ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಟಿಪ್ಪರ್ ಚಾಲಕನಿಗಾಗಿ ಹುಡುಕಾಟ ನಡೆಸಲಾಗ್ತಿದೆ. ಸರ್ಕಾರ ಜನ್ರ ಜೀವಗಳ ಜೊತೆ ಆಟವಾಡುವ ಬದಲು ರಸ್ತೆ ಗುಂಡಿಗಳನ್ನ ಆದಷ್ಟು ಬೇಗ ಮುಚ್ಚಿಸಬೇಕಿದೆ.