ಬಜೆಟ್‍ನಲ್ಲಿ ಮುಂದಿನ 25 ವರ್ಷಗಳ ಮುಂದಾಲೋಚನೆಯಿದೆ: ಬಿ.ಸಿ.ಪಾಟೀಲ್

Public TV
2 Min Read

ಹಾವೇರಿ: ಮುಂದಿನ ಇಪ್ಪತ್ತೈದು ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ನಿಟ್ಟೂರು ಗ್ರಾಮದಲ್ಲಿ ಬಜೆಟ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಮುಂದಿನ ಇಪ್ಪತ್ತೈದು ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಬಜೆಟ್ ಮಂಡನೆ ಆಗಿದೆ. ಬಜೆಟ್‍ನಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಣೆ ಮಾಡಿದ್ದಾರೆ. ಬೆಳೆ ಸಮೀಕ್ಷೆಗೆ ಡ್ರೋಣ್ ತಂತ್ರಜ್ಞಾನದ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಿದೆ. ಒಂಬತ್ತು ಲಕ್ಷ ಹೆಕ್ಟೇರ್ ಜಮೀನಿನ ನೀರಾವರಿಗೆ ಒತ್ತು ನೀಡಿದೆ. ನದಿಗಳ ಜೋಡಣೆ ಮೂಲಕ ನೀರಾವರಿ ಮಾಡುವ ವಿಚಾರ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರು ಪಕ್ಷ ಬಿಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೂಡಾ ಕಾಂಗ್ರೆಸ್ ತ್ಯಜಿಸಿದರೆ ಆಶ್ಚರ್ಯವಿಲ್ಲ. ಅಲ್ಲಿ ಆ ರೀತಿಯ ವಾತಾವರಣವಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಬ್ಬರ ಮುಖವನ್ನೊಬ್ಬರು ನೋಡದ ಪರಿಸ್ಥಿತಿ ಅಲ್ಲಿದೆ. ಅವರ ಪಿಸುಮಾತು, ಇವರ ಪಿಸುಮಾತು ನೋಡಿದರೆ ಅಲ್ಲಿ ಆ ರೀತಿಯ ಪರಿಸ್ಥಿತಿ ಇದೆ. ಮುಂಬರುವ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತ ಅವರು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಅನ್ನುವುದಕ್ಕಿಂತ ನಾನು ಸಿಎಂ ಆಗುತ್ತೇನೆ, ನಾನು ಸಿಎಂ ಆಗುತ್ತೇನೆ ಅಂತ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪೈಪೋಟಿ ನಡೆದಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮೋದಿಯವರು ದೇವರ ಸ್ವರೂಪ: ಶಿವರಾಜ್ ಸಿಂಗ್ ಚೌಹಾಣ್

ಸಿದ್ದರಾಮಯ್ಯ ಮತ್ತು ಸಿ.ಎಂ.ಇಬ್ರಾಹಿಂ ಜಿಗರಿ ದೋಸ್ತರು. ಇಬ್ರಾಹಿಂ ಸಾಹೇಬರು ಬಹಳ ಚೆನ್ನಾಗಿ ಪ್ರಾಸಬದ್ಧವಾಗಿ ಮಾತನಾಡ್ತಾರೆ. ಜಾತಿಯ ಅಧಾರದ ಮೇಲೆ ರಾಜಕೀಯ ಮಾಡುತ್ತೇವೆ ಅನ್ನುವುದು ಮೂರ್ಖತನದ ಪರಮಾವಧಿ ಎಂದರು. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ

ನದಿ ಜೋಡಣೆಗೆ ರಾಜ್ಯದಲ್ಲಿ ಕೆಲವರ ವಿರೋಧದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಪಿಆರ್ ನೋಡಿಕೊಂಡು ರಾಜ್ಯ ಸರ್ಕಾರ ಮುಂದಿನ ತೀರ್ಮಾನ ಮಾಡುತ್ತದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಡಿಪಿಆರ್‍ನಲ್ಲಿ ರಾಜ್ಯಕ್ಕೆ ಅನುಕೂಲ ಆಗುತ್ತದೆ ಇಲ್ಲವೋ ನೋಡುತ್ತಾರೆ. ಡಿಪಿಆರ್ ನಲ್ಲಿ ನಮ್ಮ ರಾಜ್ಯಕ್ಕೆ ಅನುಕೂಲ ಆಗುವುದಿಲ್ಲ ಅಂದರೆ ಅದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಕೆಲವು ಸಚಿವರು ಕರೆ ಮಾಡಿದರು ಕರೆಯನ್ನು ಎತ್ತುತ್ತಿಲ್ಲ, ಬಹಳ ದುರಹಂಕಾರಿಗಳಿದ್ದಾರೆ ಅನ್ನುವ ಶಾಸಕ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ರೇಣುಕಾಚಾರ್ಯ ಅವರು ಯಾರು ಅಂಥವರಿದ್ದಾರೆ ಅವರ ಹೆಸರು ಹೇಳಬೇಕು. ಸುಮ್ಮನೆ ಕಂಬಳಕ್ಕೆ ಕಲ್ಲು ಕಟ್ಟಿ ಹೊಡೆಯೋದು ಸರಿಯಲ್ಲ. ಯತ್ನಾಳರು ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಾರೆ ಅಂತಾರೆ. ಆದರೆ ರೇಣುಕಾಚಾರ್ಯರು ಹೀಗೆ ಹೇಳುತ್ತಾರೆ. ಹೀಗೆ ಹೇಳಿಕೊಂಡು ಹೋಗೋದು ಒಳ್ಳೆಯದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *