ಆಜಾನ್‌ನಿಂದ ವಿದ್ಯಾರ್ಥಿಗಳು, ವೃದ್ಧರು, ರೋಗಿಗಳಿಗೆ ತೊಂದರೆ ಆಗ್ತಿದೆ: ಈಶ್ವರಪ್ಪ

Public TV
2 Min Read

ಶಿವಮೊಗ್ಗ: ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದಾಗಿ ವಿದ್ಯಾರ್ಥಿಗಳು, ರೋಗಿಗಳು, ವಯೋವೃದ್ಧರಿಗೆ ತೊಂದರೆ ಆಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಮತ್ತು ಚರ್ಚ್‌ಗಳಲ್ಲಿ ಯಾರಿಗೂ ತೊಂದರೆ ಆಗದಂತೆ ಪೂಜೆ-ಪುನಸ್ಕಾರ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ನಿಮ್ಮ ಮಸೀದಿಗಳೂ ಹಾಗೆಯೇ ಇರಲಿ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬೇಡ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ಆದೇಶವನ್ನು ನೀವು ಏಕೆ ಮೀರುತ್ತಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜನ ಮೂರ್ಖರಲ್ಲ: ಡಿಕೆಶಿಗೆ ಬಿಜೆಪಿ ತಿರುಗೇಟು

ಹಿಜಬ್ ಬಗ್ಗೆ ಇದೇ ರೀತಿ ಚರ್ಚೆ ಬಂತು. ಕೋರ್ಟ್ ತೀರ್ಪು ಕೊಟ್ಟಿದೆ. ತೀರ್ಪು ನಂತರವೂ ಪಿಎಫ್‌ಐ, ಎಸ್‌ಡಿಪಿಐನವರು ಬಂದ್‌ಗೆ ಕರೆ ಕೊಟ್ಟರು. ಇದರ ಅರ್ಥ ಏನು? ಕೋರ್ಟ್ ತೀರ್ಪನ್ನು ನಾವು ತಿರಸ್ಕಾರ ಮಾಡಿದ್ದೇವೆ ಅಂತಲ್ಲವೆ? ನ್ಯಾಯಾಲಯಕ್ಕೆ ಅಪಮಾನ ಮಾಡಿದ ಹಾಗೆ ಎಂದು ವಾಗ್ದಾಳಿ ನಡೆಸಿದರು.

ಇಂತಹ ಬೆಳವಣಿಗೆಗಳಿಗೆ ಕಾಂಗ್ರೆಸ್ ನಾಯಕರು ಬೆಂಬಲ ಕೊಡುತ್ತಾರೆ. ಶಾಂತಿಯಿಂದ ಮೆರವಣಿಗೆ ಮಾಡಿ ಬಂದ್ ಮಾಡಿ ಅಂದರೆ, ಏನು ತಪ್ಪು ಅಂತಾ ಸಿದ್ದರಾಮಯ್ಯ ಕೇಳುತ್ತಾರೆ. ಸಂವಿಧಾನ, ಕೋರ್ಟ್ ಮೀರಿ ಮುಸಲ್ಮಾನರಿಗೆ ಬೆಂಬಲ ಕೊಡುವುದೇ ನಮ್ಮ ಉದ್ದೇಶ ಎನ್ನುತ್ತಾರೆ ಕಾಂಗ್ರೆಸ್‌ನವರು. ಇದು ಮುಸಲ್ಮಾನರಿಗೆ ಕೊಡುತ್ತಿರುವ ಕುಮ್ಮಕ್ಕು. ಹಿಂದೂ, ಕ್ರಿಶ್ಚಿಯನ್, ಮುಸಲ್ಮಾನ್ ಧರ್ಮ ಇರಬಹುದು. ಎಲ್ಲರೂ ಸಹ ಸಂವಿಧಾನ ಬದ್ಧವಾಗಿ ಪೂಜೆ-ಪುನಸ್ಕಾರ ಮಾಡಿಕೊಳ್ಳಲಿ ಎಂದು ತಿಳಿಸಿದರು. ಇದನ್ನೂ ಓದಿ: ಶ್ರೀರಾಮನ ಹೆಸರಿನಲ್ಲಿ ಅಶಾಂತಿ ಸೃಷ್ಟಿ ಮಾಡಬೇಡಿ: ಹೆಚ್.ಡಿ ಕುಮಾರಸ್ವಾಮಿ

ನಮ್ಮ ದೇಶದಲ್ಲಿ ಸಂವಿಧಾನ, ನ್ಯಾಯಾಲಯ ಇದೆ. ನ್ಯಾಯಾಲಯ, ಸಂವಿಧಾನ ಏನು ಹೇಳುವುದನ್ನು ಎಲ್ಲಾ ಧರ್ಮದವರು ಪರಿಪಾಲನೆ ಮಾಡಬೇಕು. ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಮುಸಲ್ಮಾನರನ್ನು ತೃಪ್ತಿಪಡಿಸುವ ಒಂದೇ ಕಾರಣಕ್ಕೆ ಸಂವಿಧಾನ ಮೀರಿ ಮಾತನಾಡುತ್ತಿದ್ದಾರೆ. ಕೋರ್ಟ್ ಆದೇಶ ಮೀರಿ ಮಾತನಾಡ್ತಿದ್ದಾರೆ. ನೀವು ಕಾನೂನು ತಿಳಿದವರು, ಸಂವಿಧಾನ ಗೊತ್ತಿರುವವರು. ಅದೇ ರೀತಿ ಯಾವಾಗಲೂ ಕೋರ್ಟ್ ವಿಚಾರವನ್ನೇ ಪ್ರಸ್ತಾಪ ಮಾಡುವವರು. ನೀವು ಏಕೆ ಕೋರ್ಟ್ ಮಾತನ್ನು ಮೀರಬೇಡಿ ಅಂತಾ ಮುಸಲ್ಮಾನರಿಗೆ ಹೇಳ್ತಿಲ್ಲ ಎಂದು ಪ್ರಶ್ನಿಸಿದರು.

ಇವರು ಸರ್ಕಾರದ ವೈಫಲ್ಯ ಅಂತಾ ಹೇಳುತ್ತಲೇ ಇದ್ದಾರೆ. ಆದರೆ ಎಲ್ಲಾ ಚುನಾವಣೆಯಲ್ಲಿ ನಾವೇ ಗೆಲ್ಲುತ್ತಿದ್ದೇವೆ. ಸರ್ಕಾರದ ವೈಫಲ್ಯ ಅಂತಾ ಜನ ತಾನೇ ತೀರ್ಮಾನ ಮಾಡಬೇಕು? ಸರ್ಕಾರದ ವೈಫಲ್ಯವನ್ನು ಕಾಂಗ್ರೆಸ್, ಜೆಡಿಎಸ್ ತೀರ್ಮಾನ ಮಾಡೋದಲ್ಲ. ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ ಎನ್ನುವ ಒಂದೇ ಕಾರಣಕ್ಕೆ ಗ್ರಾಮ ಪಂಚಾಯ್ತಿಯಿಂದ ಹಿಡಿದು, ಲೋಕಸಭೆಯವರೆಗೆ ಎಲ್ಲಾ ಚುನಾವಣೆಯಲ್ಲಿ ನಾವೇ ಗೆದ್ದುಕೊಂಡು ಬಂದಿದ್ದೇವೆ. ಜನರ ತೀರ್ಮಾನಕ್ಕೆ ನಾವು ಬದ್ಧವೇ ಹೊರತು ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೆಗಳಿಗಲ್ಲ ಎಂದು ಚಾಟಿ ಬೀಸಿದರು. ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಲು ಲೌಡ್ ಸ್ಪೀಕರ್- ಬಿಜೆಪಿ ನಾಯಕನ ಆಫರ್

Share This Article
Leave a Comment

Leave a Reply

Your email address will not be published. Required fields are marked *