ಅಯ್ಯಪ್ಪ, ನೆಹರು ನಗರ ಬೆಟ್ಟಗಳು ವಾಸಕ್ಕೆ ಯೋಗ್ಯವಲ್ಲ- ಭೂ ವಿಜ್ಞಾನಿಗಳ ತಂಡ

Public TV
2 Min Read

ಮಡಿಕೇರಿ: ವಿರಾಜಪೇಟೆಯಲ್ಲಿರುವ ಅಯ್ಯಪ್ಪ ಮತ್ತು ನೆಹರು ನಗರ ಬೆಟ್ಟಗಳು ಯಾವುದೇ ಕಾರಣಕ್ಕೂ ವಾಸಿಸಲು ಸುರಕ್ಷಿತವಲ್ಲ ಎಂದು ಕೇಂದ್ರ ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಜ್ಞಾನಿಗಳ ತಂಡ ಸ್ಪಷ್ಟಪಡಿಸಿದೆ.

ಎರಡೂ ಬೆಟ್ಟಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಇಂದು ವಿಜ್ಞಾನಿಗಳ ತಂಡ ಬೆಟ್ಟಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜ್ಞಾನಿ ಕಪಿಲ್ ಸಿಂಗ್, ಸದ್ಯ ಬೆಟ್ಟದಲ್ಲಿ ಮೂಡಿರುವ ಬಿರುಕುಗಳು ಮುಂದೆ ಗುಡ್ಡ ಕುಸಿತದ ಮುನ್ಸೂಚನೆಯಂತಿವೆ. ಹೀಗಾಗಿ ಅಯ್ಯಪ್ಪ ಹಾಗೂ ನೆಹರು ಬೆಟ್ಟಗಳು ಯಾವುದೇ ಕಾರಣಕ್ಕೂ ವಾಸಕ್ಕೆ ಸುರಕ್ಷಿತವಾದ ಸ್ಥಳಗಳಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಯಾವಾಗ ಬೇಕಾದರೂ ಬೆಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಅಧ್ಯಯನ ತಂಡ ಹೇಳಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ 54 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಜೊತೆಗೆ ಆಗಸ್ಟ್ 31 ರವರೆಗೆ ಈ ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗುವುದು. ಬಳಿಕ ವಿಜ್ಞಾನಿಗಳ ತಂಡದ ವರದಿಯನ್ನು ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇತ್ತೀಚೆಗೆ ಎರಡೂ ಬೆಟ್ಟಗಳು ಭಾರೀ ಬಿರುಕು ಬಿಟ್ಟಿದ್ದವು. ಹೀಗಾಗಿ ಇಂದು ಬೆಂಗಳೂರಿನಿಂದ ಭೂವಿಜ್ಞಾನಿಗಳ ತಂಡ ಆಗಮಿಸಿ, ಎರಡೂ ಬೆಟ್ಟಗಳ ಮಣ್ಣು ಪರೀಕ್ಷೆ ನಡೆಸಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನೇತೃತ್ವದಲ್ಲಿ ತಂಡ ಬೆಟ್ಟಕ್ಕೆ ಭೇಟಿ ನೀಡಿತ್ತು. ಕಪಿಲ್ ಸಿಂಗ್ ಮತ್ತು ಸುನಂದ ಬಸು ವಿಜ್ಞಾನಿಗಳ ತಂಡ ಮಳೆಗಾಲದಲ್ಲಿ ಬೆಟ್ಟ ಕುಸಿಯುವ ಸಾಧ್ಯತೆ ಇದೆ, ಹೀಗಾಗಿ ಅಲ್ಲಿ ವಾಸ ಮಾಡುವುದು ಯೋಗ್ಯವಲ್ಲ ಎಂದು ದೃಢಪಡಿಸಿದೆ.

ಈ ಹಿಂದೆಯೇ ವಿರಾಜಪೇಟೆ ನಗರದ ನೆಹರು ನಗರ ಬೆಟ್ಟ ಮತ್ತು ಅಯ್ಯಪ್ಪ ಬೆಟ್ಟ ಕುಸಿಯುವ ಭೀತಿಯಲ್ಲಿವೆ. ನೆಹರು ನಗರದಲ್ಲಿ ಬೆಟ್ಟ ಸಂಪೂರ್ಣ ಬಾಯ್ತೆರಿದಿದ್ದು, ಬೆಟ್ಟದ ಬಿರುಕು ಕ್ಷಣ ಕ್ಷಣಕ್ಕೂ ಅಗಲವಾಗುತ್ತಿದೆ. ಅಲ್ಲದೆ, ಅಯ್ಯಪ್ಪ ಬೆಟ್ಟದಲ್ಲಿ ಸಹ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲೂ ಬೆಟ್ಟ ಕುಸಿಯಬಹುದು ಎಂದು ಜಿಲ್ಲಾಡಳಿತ ತಿಳಿಸಿತ್ತು.

ಮುನ್ನೆಚ್ಚರಿಕಾ ಕ್ರಮವಾಗಿ ನೆಹರು ಬೆಟ್ಟದ 8 ಕುಟುಂಬಗಳನ್ನು ಹಾಗೂ ಅಯ್ಯಪ್ಪ ಬೆಟ್ಟದ ಬಳಿಯ 25 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಈ ಎಲ್ಲ ಕುಟುಂಬಗಳಿಗೆ ವಿರಾಜಪೇಟೆಯ ಸರ್ಕಾರಿ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಸ್ಥಳಾಂತರಿಸಿದರೂ ಯಾವ ಪ್ರಮಾಣದಲ್ಲಿ ಗುಡ್ಡ ಕುಸಿಯಲಿದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ವಿರಾಜಪೇಟೆ ನಗರದ ಜನತೆ ತೀವ್ರ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *