ಮುಂಬೈ: ಟೀಂ ಇಂಡಿಯಾ (Team India) ಆಟಗಾರ ರೋಹಿತ್ ಶರ್ಮಾ ಅವರ ಸಲಹೆಯಿಂದ U19 ವಿಶ್ವಕಪ್ ಗೆಲ್ಲಲು ಸಾಧ್ಯವಾಯ್ತು ಎಂದು ಸಿಎಸ್‌ಕೆ (Chennai Super Kings) ತಂಡದ ಆಟಗಾರ ಹಾಗೂ U19 ತಂಡದ ಕ್ಯಾಪ್ಟನ್ ಆಯುಷ್ ಮ್ಹಾತ್ರೆ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದರಲ್ಲಿ ರೋಹಿತ್ ಶರ್ಮಾ ಭೇಟಿ ಬಗ್ಗೆ ಮಾತನಾಡಿರುವ ಆಯುಷ್, ಈ ಹಿಂದೆ ಮೊದಲ ಬಾರಿಗೆ ರೋಹಿತ್ ಭಾಯ್ ಅವರನ್ನು ಭೇಟಿಯಾಗಿದ್ದೆ. ಆಗ ಅವರು ನಿಮಗೆ ಬೇಕಾದಾಗ ನನಗೆ ಕರೆ ಮಾಡಿ ಎಂದು ಹೇಳಿದ್ದರು. ವಿಶ್ವಕಪ್‌ಗೆ ಹೊರಡುವ ಒಂದು ದಿನ ಮೊದಲು ನಾನು ಅವರಿಗೆ ಕರೆ ಮಾಡಿದ್ದೆ. ಈ ವೇಳೆ ವೈಯಕ್ತಿಕವಾಗಿ ಭೇಟಿಯಾಗುವ ಇಂಗಿತವನ್ನು ತೋಡಿಕೊಂಡಿದ್ದೆ.
ಅದರಂತೆ ಅವರನ್ನು ಭೇಟಿಯಾಗಿದ್ದಾಗ ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಿದ್ದೆ. ಆ ದಿನ ನನಗೆ ಕನಸಿನ ದಿನದಂತೆ ಭಾಸವಾಗಿತ್ತು. ಆ ಎರಡು ಗಂಟೆ ಹೇಗೆ ಕಳೆಯಿತೋ ನನ್ನ ಅರಿವಿಗೆ ಬರಲಿಲ್ಲ. ಈ ವೇಳೆ ಅವರು ಸಾಕಷ್ಟು ಸಲಹೆ ನೀಡಿದ್ದರು. ಅವರಿಗೆ ಗೆಲ್ಲುವುದಾಗಿ ಭರವಸೆ ನೀಡಿದ್ದೆ ಎಂದು ಹೇಳಿಕೊಂಡಿದ್ದಾರೆ.
ಫೆ.6 ರಂದು ನಡೆದಿದ್ದ 2026ರ ಐಸಿಸಿ ಅಂಡರ್-19 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿ, 6ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
2025-26ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಯುಷ್ ಮ್ಹಾತ್ರೆ ವಿದರ್ಭ ವಿರುದ್ಧ ಭರ್ಜರಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದರು. ಟಿ20, ಲಿಸ್ಟ್ ಎ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ರೋಹಿತ್ ಶರ್ಮಾ ಅವರ ದೀರ್ಘಕಾಲದ ದಾಖಲೆಯನ್ನು ಆಯುಷ್ ಮ್ಹಾತ್ರೆ ಮುರಿದಿದ್ದರು.

