ಅಯೋಧ್ಯೆ ತೀರ್ಪಿನ ನಂತ್ರ ಆಕ್ಷೇಪಾರ್ಹ ಪೋಸ್ಟ್- 99 ಮಂದಿಯ ಬಂಧನ

Public TV
2 Min Read

ಲಕ್ನೋ: ಅಯೋಧ್ಯೆ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಇಷ್ಟೆಲ್ಲ ಮುನ್ನೆಚ್ಚರಿಕೆ ಹಾಗೂ ಕಟ್ಟೆಚ್ಚರ ವಹಿಸಿದರೂ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪುಂಡಾಟ ಮೆರೆದಿದ್ದು, ಅಂತಹವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಿದ್ದಾರೆ.

ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕಿದ್ದಕ್ಕೆ 99 ಜನರನ್ನು ಬಂಧಿಸಲಾಗಿದೆ. ಅಲ್ಲದೆ ಮಂಗಳವಾರದ ವರೆಗೆ ಒಟ್ಟು 65 ಪ್ರಕರಣಗಳನ್ನು ದಾಖಲಿಸಲಾಗಿದೆ. ಇಂತಹ ಪೋಸ್ಟ್ ಗಳನ್ನು ಡಿಲೀಟ್ ಮಾಡುವುದು ಹಾಗೂ ವರದಿ ಮಾಡಿಕೊಳ್ಳುವುದು ಸೇರಿದಂತೆ ಸಾಮಾಜಿಕ ಜಾಲತಾಣಗಳ 13,016 ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಕಚೇರಿ ಮಾಹಿತಿ ನೀಡಿದೆ.

ದೇವಾಲಯ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿಯನ್ನು ಹಿಂದೂ ಸಂಘಟನೆಗಳಿಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಶನಿವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಅಲ್ಲದೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗುತ್ತವೆ. ಇದಕ್ಕೂ ಮೊದಲೇ ಸುಪ್ರೀಂ ಕೋರ್ಟ್ ಈ ವಿವಾದ ಇತ್ಯರ್ಥಪಡಿಸಿರುವುದು ಸಂತಸಕ್ಕೆ ಕಾರಣವಾಗಿದೆ. ಇದೀಗ ರಾಮಜನ್ಮ ಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಕಾರ್ಯವು ಭರದಿಂದ ಸಾಗಿದೆ.

ದೇವಾಲಯ ಪೂರ್ಣಗೊಂಡ ನಂತರ ಹೇಗಿರಲಿದೆ ಎಂಬ ಚಿತ್ರಣದ ಮಾದರಿಯನ್ನು ಸಹ ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದೆ. ಮೂಲಗಳ ಪ್ರಕಾರ ರಾಮನ ವಿಗ್ರಹ ಪೂರ್ಣಗೊಳ್ಳಲು ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿದು ಬಂದಿದೆ.

ಈ ತೀರ್ಪನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಸ್ವಾಗತಿಸಿದರೆ, ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸತ್ಯಕ್ಕಿಂತ ನಂಬಿಕೆ ಮೇಲಿನ ವಿಜಯ ಎಂದು ಕರೆದಿದ್ದಾರೆ. ಅಲ್ಲದೆ ಸುಪ್ರೀಂ ಕೋರ್ಟ್ ಸರ್ವೋಚ್ಛ ಆದರೆ ದೋಷರಹಿತವಲ್ಲ ಎಂದಿದ್ದಾರೆ.

ಅಲ್ಲದೆ ಈ ಪಟ್ಟಿಗೆ ಮಥುರಾ, ಕಾಶಿ ಹಾಗೂ ಲಕ್ನೋದಲ್ಲಿ ದೇವಾಲಯಗಳ ಮೇಲೆ ಮಸೀದಿಗಳಿವೆ ಎಂದು ಸಂಘ ಪರಿವಾರ ಸೇರಿಸಲಿದೆ. ಈ ತೀರ್ಪನ್ನು ಇತರ ಮಸೀದಿಗಳ ಮೇಲೆ ಹಕ್ಕು ಸಾಧಿಸಲು ಬಳಸಲಿದೆ. ದೇಶವು ಹಿಂದೂ ರಾಷ್ಟ್ರದ ಹಾದಿಯಲ್ಲಿ ಸಾಗುತ್ತಿದೆ ಎಂದು ಓವೈಸಿ ಆತಂಕ ವ್ಯಕ್ತಪಡಿಸಿದ್ದಾರೆ.

ಸಂಘ ಪರಿವಾರ ಮತ್ತು ಬಿಜೆಪಿ ಹಿಂದೂ ರಾಷ್ಟ್ರದ ಹಾದಿ ಅಯೋಧ್ಯೆಯಿಂದ ಪ್ರಾರಂಭವಾಗುತ್ತಿದೆ. ಈಗ ಅವರು ಎನ್‍ಆರ್ ಸಿ ಹಾಗೂ ಪೌರತ್ವ ತಿದ್ದುಪಡಿ ಮಸೂದೆಯನ್ನು ತರಲು ಬಯಸಿದ್ದಾರೆ. ಈ ಮೂಲಕ ಮೋದಿ 2.0 ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿದೆ ಎಂದು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *