ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಾಯಕರ ಕೆಲಸವಲ್ಲ: ಮೋದಿ ವಿರುದ್ಧ ದೀದಿ ವಾಗ್ದಾಳಿ

Public TV
1 Min Read

ಕೋಲ್ಕತ್ತಾ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಅನ್ನೋದು ನಾಯಕರ ಕೆಲಸವಲ್ಲ. ಧಾರ್ಮಿಕ ಮುಖಂಡರ ಕೆಲಸ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamta Banerjee) ವಾಗ್ದಾಳಿ ನಡೆಸಿದರು.

ನಗರದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಣಪ್ರತಿಷ್ಠೆ ಮಾಡುವುದು ನಮ್ಮ ಕೆಲಸವಲ್ಲ, ಧಾರ್ಮಿಕ ಮುಖಂಡರ ಕೆಲಸ. ಮೂಲ ಸೌಕರ್ಯ ಕಲ್ಪಿಸುವುದ ಅಷ್ಟೇ ನಮ್ಮ ಕೆಲಸ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಲರಾಮನಿಗೆ ಅರ್ಪಿಸಲು ಹಲ್ವಾ ತಯಾರಿಸುವ ಕಡಾಯಿ ರೆಡಿ- ಏನಿದರ ವಿಶೇಷ?

ಜ.22ರ ದೀದಿ ಕಾರ್ಯಕ್ರಮಗಳೇನು..?: ಅಯೋಧ್ಯೆಯಲ್ಲಿ (Ayodhya) ರಾಮಲಲ್ಲಾ ಪ್ರಾಣಪ್ರತಿಷ್ಠೆ (Pran Prathistha Ceremony) ಸಿದ್ಧತೆಗಳ ನಡುವೆ ಮಮತಾ ಬ್ಯಾನರ್ಜಿ ಅವರು ದೊಡ್ಡ ಘೋಷಣೆ ಮಾಡಿದ್ದಾರೆ. ಜನವರಿ 22 ರಂದು ತಮ್ಮ ಪಕ್ಷದ ಟಿಎಂಸಿ ಸರ್ವ ಧರ್ಮ ರ್ಯಾಲಿ ಅಂದರೆ ಸದ್ಭಾವನಾ ರ್ಯಾಲಿಯನ್ನು ನಡೆಸಲಿದೆ. ಈ ರ್ಯಾಲಿ ಎಲ್ಲ ಧರ್ಮದವರಿಗಾಗಿ ಇರುತ್ತದೆ. ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು ಮತ್ತು ಗುರುದ್ವಾರಗಳಿಗೆ ಹೋಗುವ ಜನರಂತೆ ರ್ಯಾಲಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನಕ್ಕೂ ಭೇಟಿ ನೀಡುವುದಾಗಿ ಮಮತಾ ಹೇಳಿದ್ದಾರೆ.

ಮೊದಲು ಕಾಳಿಘಾಟ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕೋಲ್ಕತ್ತಾದ ಹಜ್ರಾ ಮೋಡ್‌ನಿಂದ ಸರ್ವಧರ್ಮ ರ್ಯಾಲಿಯನ್ನು ಆಯೋಜಿಸಲಿದ್ದಾರೆ ಎಂದು ಹೇಳಲಾಗಿದೆ. ರ್ಯಾಲಿಯಲ್ಲಿ ಭಾಗವಹಿಸಲು ಸಾಮಾನ್ಯ ಜನರನ್ನು ಆಹ್ವಾನಿಸಲಾಗಿದೆ. ಪಾರ್ಕ್ ಸರ್ಕಸ್ ಮೈದಾನದಲ್ಲಿ ರ್ಯಾಲಿ ಸಮಾಪನಗೊಳ್ಳಲಿದ್ದು, ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಪ್ರತಿ ಜಿಲ್ಲೆ ಮತ್ತು ವಾರ್ಡ್‌ಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಸದ್ಭಾವನಾ ರ್ಯಾಲಿ ನಡೆಸುವಂತೆ ಮಮತಾ ಬ್ಯಾನರ್ಜಿ ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ.

Share This Article