ಚಳಿಯಿಂದ ಗೋವುಗಳನ್ನು ರಕ್ಷಿಸಲು ಕೋಟು ಖರೀದಿಸಲು ಮುಂದಾದ ಅಯೋಧ್ಯಾ ಪಾಲಿಕೆ

Public TV
1 Min Read

ಅಯೋಧ್ಯೆ: ನಗರದ ಗೋವುಗಳ ಆಶ್ರಯ ತಾಣದಲ್ಲಿ ಇರುವ ಗೋವುಗಳನ್ನು ಚಳಿಯಿಂದ ರಕ್ಷಿಸಲು ಅಯೋಧ್ಯೆ ಮಹಾನಗರ ಪಾಲಿಕೆ ಹೊಸ ಉಪಾಯ ಕಂಡುಕೊಂಡಿದೆ. ಗೋವುಗಳಿಗಾಗಿ ಸೆಣಬಿನ ಕೋಟುಗಳನ್ನು ಖರೀದಿಸಲು ಪಾಲಿಕೆ ಮುಂದಾಗಿದೆ.

ನಗರ ನಿಗಮ ಆಯುಕ್ತರಾದ ನೀರಜ್ ಶುಕ್ಲಾ ಈ ಬಗ್ಗೆ ಮಾತನಾಡಿ, ನಾವು ಗೋವುಗಳ ಕೋಟುಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿದ್ದೇವೆ. ಈ ಯೋಜನೆಯನ್ನು ಮೂರು-ನಾಲ್ಕು ಹಂತಗಳಲ್ಲಿ ಜಾರಿಗೆ ತರಲಾಗುವುದು. ಮೊದಲು ನಾವು ಬೈಶಿಂಗ್‍ಪುರ ಗೋವುಗಳ ಆಶ್ರಯ ತಾಣದಿಂದ ಪ್ರಾರಂಭಿಸುತ್ತಿದ್ದೇವೆ. ಇಲ್ಲಿ 700 ಎತ್ತುಗಳು ಮತ್ತು ಸುಮಾರು 1,200 ಹಸುಗಳು, ಕರುಗಳು ಇವೆ. ನಾವು ಮೊದಲಿಗೆ ಕರುಗಳಿಗೆ 100 ಕೋಟುಗಳನ್ನು ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ನವೆಂಬರ್ ಅಂತ್ಯದಲ್ಲಿ ಮೊದಲ ಹಂತದ ಕೋಟು ವಿತರಣೆ ಯೋಜನೆ ನಡೆಯಲಿದೆ. ಈ ಕೋಟುಗಳಿಗೆ ಒಂದಕ್ಕೆ 250ರಿಂದ 300 ರೂ. ಬೆಲೆ ಇದೆ. ಕರುಗಳಿಗಾಗಿ 3 ಪದರದ ಕೋಟುಗಳನ್ನು ತಯಾರಿಸಲಾಗುತ್ತಿದೆ. ಸೆಣಬನ್ನು ಹೊರತುಪಡಿಸಿ ಈ ಕೋಟುಗಳ ಒಳಗಿನ ಪದರದಲ್ಲಿ ಮೃದು ಬಟ್ಟೆಯಿಟ್ಟು ಹೊಲಿಯಲು ಹೇಳಿದ್ದೇವೆ. ಇದರಿಂದ ಕರುಗಳಿಗೆ ಬೆಚ್ಚಗಾಗುತ್ತದೆ ಎಂದು ಶುಕ್ಲಾ ಅವರು ಹೇಳಿದರು.

ಹಸು ಹಾಗೂ ಹೋರಿಗಳಿಗೆ ಬೇರೆ ಬೇರೆ ಡಿಸೈನ್‍ನ ಕೋಟುಗಳನ್ನು ತಯಾರಿಸಲಾಗುತ್ತದೆ. ಹೋರಿಗಳಿಗೆ ಕೇವಲ ಸೆಣಬಿನಿಂದ ತಯಾರಿಸಿದ ಕೋಟುಗಳನ್ನು ನೀಡಲಾಗುತ್ತದೆ. ಆದರೆ ಹಸುಗಳಿಗೆ 2 ಪದರದ ಸೆಣಬಿನ ಕೋಟು ನೀಡಲಾಗುತ್ತದೆ. ಅಲ್ಲದೆ ಹೆಚ್ಚು ಚಳಿ ಇದ್ದಾಗ ಆಶ್ರಯ ತಾಣದ ನೆಲದ ಮೇಲೆ ಭತ್ತದ ಹುಲ್ಲಿಗೆ ಬೆಂಕಿ ಹಾಕಿ ಗೋವುಗಳಿಗೆ ಬೆಚ್ಚಗೆ ಆಗುವಂತೆ ಮಾಡಲು ಯೋಚಿಸಿದ್ದೇವೆ ಎಂದರು.

ನಾವು ಗೋವುಗಳ ರಕ್ಷಣೆ, ಸೇವೆಗೆ ಹೆಚ್ಚು ಗಮನ ಕೊಡುತ್ತೇವೆ. ನಗರದ ಹಲವೆಡೆ ಗೋವುಗಳ ಆಶ್ರಯ ತಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಅವುಗಳನ್ನು ರಾಜ್ಯದಲ್ಲೇ ಉತ್ತಮ ಗೋವು ಆಶ್ರಯ ತಾಣಗಳನ್ನಾಗಿ ಮಾಡುತ್ತೇವೆ ಎಂದು ಮೇಯರ್ ರಿಷಿಕೇಶ್ ಉಪಧ್ಯಾಯ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *