ತಡ ಮಾಡುತ್ತಲೇ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಶ್ರೀಮನ್ನಾರಾಯಣ!

Public TV
1 Min Read

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಟೀಸರ್ ಮೂಲಕ ಇದರ ಕಥೆಯ ಮಜಾ ಏನೆಂಬುದು ಎಲ್ಲರಿಗೂ ತಿಳಿದು ಹೋಗಿದೆ. ಆದರೆ ಈ ಚಿತ್ರ ಸುದೀರ್ಘ ಕಾಲವನ್ನು ತೆಗೆದುಕೊಂಡು ಚಿತ್ರೀಕರಣಗೊಂಡಿದೆ, ತಡವಾಗಿದೆ ಎಂಬೆಲ್ಲ ಕೊರಗು ಅಭಿಮಾನಿಗಳಲ್ಲಿ ಇದ್ದೇ ಇದೆ. ಆದರೆ ಹೀಗೆ ತಡ ಮಾಡಿಯೇ ಶ್ರೀಮನ್ನಾರಾಯಣ ಸಾರ್ವಕಾಲಿಕ ದಾಖಲೆಯೊಂದರ ರೂವಾರಿಯಾಗಿದ್ದಾನೆ!

ಅಷ್ಟಕ್ಕೂ ಅವನೇ ಶ್ರೀಮನ್ನಾರಾಯಣ ಚಿತ್ರ ಇಷ್ಟೊಂದು ತಡವಾಗಿ ರೂಪುಗೊಳ್ಳಲು ಕಾರಣವೇನು ಅಂತೊಂದು ಪ್ರಶ್ನೆ ಹಾಗೇ ಉಳಿದು ಹೋಗಿತ್ತು. ಇದಕ್ಕೆ ಉತ್ತರ ಹುಡುಕುತ್ತಾ ಹೋದರೆ ಮಜವಾದ ಉತ್ತರಗಳೇ ಎದುರುಗೊಳ್ಳುತ್ತವೆ!

ಅಂದಹಾಗೆ ಅವನೇ ಶ್ರೀಮನ್ನಾರಾಯಣ ಚಿತ್ರದ ಕಥೆ ಎಂಬತ್ತರ ದಶಕದಲ್ಲಿ ನಡೆಯುವಂಥಾದ್ದೆಂಬ ಸುಳಿವು ಈಗಾಗಲೇ ಸಿಕ್ಕಿದೆ. ಈ ಕಾಲ ಘಟ್ಟವನ್ನು ಮರು ಸೃಷ್ಟಿಸೋದೇನು ಸಲೀಸಿನ ಕೆಲಸವಲ್ಲ. ಅದನ್ನು ಮತ್ತೆ ಸೃಷ್ಟಿಸೋದಕ್ಕಾಗಿ ಚಿತ್ರತಂಡ ಭಾರೀ ರಿಸ್ಕು ತೆಗೆದುಕೊಂಡಿದೆ. ಸಾಮಾನ್ಯವಾಗಿ ಒಂದು ಚಿತ್ರಕ್ಕೆ ಎರಡ್ಮೂರು ಸೆಟ್ ಹಾಕಿದರೆ ಅದೇ ಹೆಚ್ಚು. ಆದರೆ ಅವನೇ ಶ್ರೀಮನ್ನಾರಾಯಣ ಚಿತ್ರದ ಬಹುಪಾಲು ಚಿತ್ರೀಕರಣ ಸೆಟ್‍ನಲ್ಲಿಯೇ ನಡೆದಿದೆ. ಇದಕ್ಕೆಂದೇ ಬರೋಬ್ಬರಿ ಇಪ್ಪತ್ತು ಸೆಟ್‍ಗಳನ್ನು ಹಾಕಲಾಗಿತ್ತಂತೆ!

ಹೀಗೆ ಸೆಟ್ ಹಾಕಿ ಚಿತ್ರೀಕರಿಸಿರೋದರಿಂದಲೇ ಇಡೀ ಚಿತ್ರ ರಿಚ್ ಆಗಿ ಮೂಡಿ ಬಂದಿದೆಯಂತೆ. ಈ ಚಿತ್ರ ಕನ್ನಡ ಮಾತ್ರವಲ್ಲದೇ ತಮಿಳು, ಹಿಂದಿ, ತೆಲುಗು, ಮಲೆಯಾಳಂನಲ್ಲಿಯೂ ಬಿಡುಗಡೆಯಾಗಲಿದೆ. ಇನ್ನುಳಿದಂತೆ ಈ ಚಿತ್ರಕ್ಕೆ ಅತೀ ಹೆಚ್ಚು ದಿನ ಚಿತ್ರೀಕರಣಗೊಂಡ ಚಿತ್ರವೆಂಬ ಗರಿಯೂ ಮೂಡಿಕೊಂಡಿದೆ. ಅವನೇ ಶ್ರೀಮನ್ನಾರಾಯಣಕ್ಕಾಗಿ ಇನ್ನೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಎಂಭತ್ತರ ದಶಕವನ್ನು ಮತ್ತೆ ಸೃಷ್ಟಿಸೋ ಕಾಯಕ ಈ ಇನ್ನೂರು ದಿನವೂ ನೆರವೇರಿದೆ. ಹೀಗೆ ತಡ ಮಾಡಿಕೊಂಡೇ ಈ ಚಿತ್ರ ದಾಖಲೆಯ ರೂವಾರಿಯಾಗಿ ಬಿಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *