ಭಾರತ್-NCAP ನಲ್ಲಿ ಟಾಟಾ ಹ್ಯಾರಿಯರ್ EVಗೆ ಸಿಕ್ತು 5 ಸ್ಟಾರ್ ರೇಟಿಂಗ್

By
3 Min Read

ನವದೆಹಲಿ: ಭಾರತದ ಪ್ರಮುಖ ವಾಹನ ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್ (Tata Motors) ಜೂನ್ 3ರಂದು ತಮ್ಮ ಹೊಸ ಎಲೆಕ್ಟ್ರಿಕ್ SUV, ಟಾಟಾ ಹ್ಯಾರಿಯರ್ EV(Tata Harrier EV) ಯನ್ನು ಬಿಡುಗಡೆ ಮಾಡಿತ್ತು. ಇದೀಗ ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (Bharat NCAP)ನಲ್ಲಿ ಹ್ಯಾರಿಯರ್ EV 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

ಭಾರತ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 32ಕ್ಕೆ 32 ಅಂಕಗಳನ್ನು ಗಳಿಸಿದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 45 ಅಂಕಗಳನ್ನು ಪಡೆದು ಹ್ಯಾರಿಯರ್ EV 5-ಸ್ಟಾರ್ ರೇಟಿಂಗ್ ಪಡೆದಿದೆ. ಹ್ಯಾರಿಯರ್ EV ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷತೆ ಒದಗಿಸುತ್ತದೆ ಎಂದು ಈ ಪರೀಕ್ಷೆಯಲ್ಲಿ ಸಾಬೀತಾಗಿದೆ. ಇದನ್ನೂ ಓದಿ: 14.89 ಲಕ್ಷಕ್ಕೆ ಹೋಂಡಾ ಸಿಟಿ ಸ್ಪೋರ್ಟ್ ಎಡಿಷನ್ ಬಿಡುಗಡೆ – ಕಾರ್‌ನಲ್ಲಿ ಏನು ಬದಲಾವಣೆಯಾಗಿದೆ?

7-ಏರ್‌ಬ್ಯಾಗ್‌ಗಳು, ಲೆವೆಲ್-2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಫ್ರಂಟ್ & ರೇರ್ ಪಾರ್ಕಿಂಗ್ ಸೆನ್ಸರ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಆಟೋ ಪಾರ್ಕ್ ಅಸಿಸ್ಟ್, ರಿವರ್ಸ್ ಅಸಿಸ್ಟ್, ಡಿಜಿಟಲ್ ವಿಡಿಯೋ ರೆಕಾರ್ಡರ್, ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಲ್ ವೀಲ್ ಡಿಸ್ಕ್ ಬ್ರೇಕ್ ಮುಂತಾದ ವೈಶಿಷ್ಟ್ಯಗಳನ್ನು ಹ್ಯಾರಿಯರ್ EV ಒಳಗೊಂಡಿದೆ. ಕಾರುಗಳಲ್ಲಿ ನೀವು 360 ಡಿಗ್ರಿ ಕ್ಯಾಮೆರಾ ಬಗ್ಗೆ ಕೇಳಿರುತ್ತೀರಾ, ಆದರೆ ಹ್ಯಾರಿಯರ್ EVಯಲ್ಲಿ 540 ಡಿಗ್ರಿ ಕ್ಯಾಮೆರಾ ಇದೆ. 360 ಡಿಗ್ರಿ ಕ್ಯಾಮೆರಾ ಜೊತೆ ಟ್ರಾನ್ಸ್ಪರೆಂಟ್ ಮೋಡ್ ನೀಡಲಾಗಿದ್ದು ಇದರಲ್ಲಿ ಕಾರಿನ ಕೆಳಗಡೆ ಏನಿದೆ ಎಂದು ತಿಳಿಯಲಿದೆ.

ಹ್ಯಾರಿಯರ್ EV 65 ಕಿಲೋ ವ್ಯಾಟ್ (kwh) ಮತ್ತು 75 ಕಿಲೋ ವ್ಯಾಟ್ (kwh) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಒಂದು ಪೂರ್ತಿ ಚಾರ್ಜ್‌ನಲ್ಲಿ 627 ಕಿಲೋಮೀಟರ್‌ವರೆಗೂ ಕ್ರಮಿಸುವ ಸಾಮರ್ಥ್ಯವನ್ನು ಒಳಗೊಂಡಿದೆ ಎಂದು ಕಂಪನಿ ಹೇಳಿದೆ. ಚಾರ್ಜಿಂಗ್ ವಿಷಯಕ್ಕೆ ಬಂದರೆ, 7.2kW AC ಚಾರ್ಜರ್ ಹ್ಯಾರಿಯರ್ EV ಯನ್ನು 10-100% ಚಾರ್ಜ್ ಮಾಡಲು 10.7 ಗಂಟೆ ತೆಗೆದುಕೊಳ್ಳುತ್ತದೆ. 120kW DC ಫಾಸ್ಟ್ ಚಾರ್ಜರ್ 20-80% ಚಾರ್ಜ್ ಮಾಡಲ ಕೇವಲ 25 ನಿಮಿಷ ತೆಗೆದುಕೊಳ್ಳುತ್ತದೆ.

ಟಾಟಾ ಹ್ಯಾರಿಯರ್ EV ಅಡ್ವೆಂಚರ್, ಫಿಯರ್‌ಲೆಸ್ ಹಾಗೂ ಎಂಪವರ್ಡ್ ಎಂಬ ಮೂರು ರೂಪಾಂತರಗಳಲ್ಲಿ (Variants) ದೊರೆಯುತ್ತದೆ. ಹ್ಯಾರಿಯರ್ EV ಅತ್ಯುತ್ತಮವಾದ ಹೊರಾಂಗಣ ವಿನ್ಯಾಸವನ್ನು ಪಡೆದಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಕನೆಕ್ಟೆಡ್ ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಬೈ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಫಾಗ್ ಲ್ಯಾಂಪ್ ಮತ್ತು 19-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ನೈನಿತಾಲ್ ನಾಕ್ಟರ್ನ್, ಪ್ರಿಸ್ಟೀನ್ ವೈಟ್, ಎಂಪವರ್ಡ್ ಆಕ್ಸೈಡ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಬಣ್ಣಗಳಲ್ಲಿ ಈ ಕಾರು ದೊರೆಯಲಿದೆ.

ಇನ್ನು ಒಳಾಂಗಣ ವಿನ್ಯಾಸದ ಬಗ್ಗೆ ಮಾತಾಡುವುದಾದರೆ ಇದರ ಕ್ಯಾಬಿನ್ ಅತ್ಯಾಧುನಿಕವಾಗಿದೆ. 14.5 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ , ಆಂಬಿಯೆಂಟ್ ಲೈಟಿಂಗ್, ವಾಯ್ಸ್ ಅಸಿಸ್ಟೆಡ್ ಪ್ಯಾನರೋಮಿಕ್ ಸನ್‌ರೂಫ್, ಜೆಬಿಎಲ್ ಬ್ಲ್ಯಾಕ್ 10-ಸ್ಪೀಕರ್ ಸೌಂಡ್ ಸಿಸ್ಟಮ್, ವಿಂಡೋ ಸನ್‌ಬ್ಲೈಂಡ್‌ಗಳು, ಡ್ಯೂಯಲ್ ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌, ಹೀಗೆ ದೊಡ್ಡ ಪಟ್ಟಿಯೇ ಇದೆ,

ಟಾಟಾ ಹ್ಯಾರಿಯರ್ ಇವಿ RWD ವೇರಿಯೆಂಟ್ ಕಾರಿನ ಬೆಲೆ 21.49 ಲಕ್ಷ ರೂ.ನಿಂದ 27.49 ಲಕ್ಷ ರೂ.ವರಿಗೆ ಇದೆ. ಕ್ವಾಡ್ ವೀಲ್ ಡ್ರೈವ್ (QWD) ವೇರಿಯಂಟ್ ಬೆಲೆಯನ್ನು ಜೂನ್ 27 ರಂದು ಘೋಷಿಸಲಾಗುತ್ತದೆ. ಜುಲೈ 2, 2025ರಿಂದ ಬುಕಿಂಗ್‌ಗಳು ಆರಂಭಗೊಳ್ಳಲಿದೆ.

Share This Article