ನವೆಂಬರ್ 9ರಿಂದ ಎಎಪಿ ವತಿಯಿಂದ ಆಟೋ ಚಾಲಕರ ಪ್ರತಿಭಟನೆ

Public TV
2 Min Read

ಬೆಂಗಳೂರು: ಆಟೋ ರಿಕ್ಷಾಗಳಿಗೆ ಬಳಸುವ ಎಲ್‍ಪಿಜಿ ಬೆಲೆಯು ಕಳೆದ ಒಂದು ವರ್ಷದಲ್ಲಿ ಸುಮಾರು ಎರಡು ಪಟ್ಟು ಏರಿಕೆಯಾಗಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯ ಆಟೋ ಚಾಲಕರ ಘಟಕವು ನವೆಂಬರ್ 9ರಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಮ್ ಆದ್ಮಿ ಪಾರ್ಟಿಯ ಆಟೋ ಘಟಕದ ರಾಜ್ಯಾಧ್ಯಕ್ಷರಾದ ಅಯೂಬ್ ಖಾನ್, “ಪದೇಪದೇ ಎಲ್‍ಪಿಜಿ ಬೆಲೆ ಏರಿಕೆ ಮಾಡುವ ಕೇಂದ್ರ ಸರ್ಕಾರವು ಆಟೋ ಚಾಲಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಲೀಟರ್ ಗೆ 38 ರೂಪಾಯಿಯಿದ್ದ ಎಲ್‍ಪಿಜಿ ಬೆಲೆ ಈಗ 66 ರೂಪಾಯಿ ತಲುಪಿದೆ. ಅಂದರೆ, ಕೇವಲ ಒಂದು ವರ್ಷದಲ್ಲಿ 28 ರೂಪಾಯಿ ಏರಿಕೆಯಾಗಿದೆ. ಕಳೆದ ವಾರ ಒಂದೇ ಸಲ 6 ರೂಪಾಯಿ ಹೆಚ್ಚಿಸಲಾಗಿದೆ. ಪ್ರಯಾಣಿಕರು ನೀಡುವ ಹಣವು ಎಲ್‍ಪಿಜಿಗೇ ಖರ್ಚಾಗುತ್ತಿದ್ದು, ಆದಾಯವಿಲ್ಲದೇ ಚಾಲಕರ ಬದುಕು ದುಸ್ತರವಾಗಿದೆ. ಆಟೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಎಲ್‍ಪಿಜಿ ಪೂರೈಸುವ ಕಂಪನಿಗಳ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ. ಈ ಸರ್ಕಾರಕ್ಕೆ ಆಟೋ ಚಾಲಕರು ಹಾಗೂ ಪ್ರಯಾಣಿಕರ ಹಿತ ಬೇಕಾಗಿಲ್ಲ. ಉದ್ಯಮಿಗಳು ಕೊಡುವ ಹಣದ ಆಸೆಗಾಗಿ ಸಾಮಾನ್ಯ ಜನರ ಜೀವನವನ್ನು ಶೋಚನೀಯ ಸ್ಥಿತಿಗೆ ತಳ್ಳಲಾಗುತ್ತಿದೆ. ಉಳ್ಳವರ ಪರವಾಗಿರುವ ಈ ಸರ್ಕಾರವನ್ನು ಆಡಳಿತದಿಂದ ಕಿತ್ತೊಗೆಯುವವರೆಗೂ ಜನಸಾಮಾನ್ಯರಿಗೆ ನೆಮ್ಮದಿ ಎಂಬುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದೀಪಾವಳಿಯ ಫ್ಯಾಮಿಲಿ ಫೋಟೋ ಹಂಚಿಕೊಂಡು ಬಿಗ್ ಬಿ ಸಂಭ್ರಮ

ಬೆಂಗಳೂರು ನಗರ ಎಎಪಿ ಆಟೋ ಚಾಲಕರ ಘಟಕದ ಅಧ್ಯಕ್ಷರಾದ ವೆಂಕಟಗೌಡ ಮಾತನಾಡಿ, “ಎಲ್‍ಪಿಜಿ ಬೆಲೆ ಏರಿಕೆ ಖಂಡಿಸಿ ನವೆಂಬರ್ 9ರ ಮಂಗಳವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಟೋ ಚಾಲಕರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದಿನಿಂದ ಆಟೋ ಚಾಲಕರು ಕಪ್ಪು ಪಟ್ಟಿ ಧರಿಸಿ ಚಾಲನೆ ಮಾಡುವ ಮೂಲಕ ಜನವಿರೋಧಿ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲಿದ್ದಾರೆ. ಶ್ರೀಸಾಮಾನ್ಯರಿಗೆ ಕಂಟಕವಾಗಿರುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಹೇಳಿದರು. ಇದನ್ನೂ ಓದಿ: ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ – 10 ಮಂದಿ ಸಜೀವ ದಹನ

ಬೆಂಗಳೂರು ನಗರದ ಎಎಪಿ ಆಟೋ ಚಾಲಕರ ಘಟಕದ ಪ್ರಧಾನ ಕಾರ್ಯದರ್ಶಿ ಉಸ್ಮಾನ್, ಹಾಗೂ ಆತೀಕ್ ಅಹಮದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *