ಕಪಟ ನಾಟಕ ಪಾತ್ರಧಾರಿ: ಆಟೋ ಚಾಲಕನ ಬದುಕಿನ ಸವಾರಿ!

Public TV
1 Min Read

ಬೆಂಗಳೂರು: ಇದುವರೆಗೂ ಆಟೋ ಚಾಲಕರ ಬಗ್ಗೆ ಒಂದಷ್ಟು ಕಥೆಗಳು ಕನ್ನಡದಲ್ಲಿ ಸಿನಿಮಾ ಸ್ವರೂಪ ಪಡೆದುಕೊಂಡಿವೆ. ಇದೀಗ ಇದೇ ನವೆಂಬರ್ 8ರಂದು ತೆರೆಗಾಣಲು ರೆಡಿಯಾಗಿರೋ ಕಪಟ ನಾಟಕ ಪಾತ್ರಧಾರಿ ಚಿತ್ರ ಕೂಡಾ ಆಟೋ ಚಾಲಕನೊಬ್ಬನ ಬದುಕಿನ ಕಥೆಯಾಧರಿಸಿದ ಚಿತ್ರವೇ. ಆದರೆ ಈ ಕಥೆ ಮಾತ್ರ ಈವರೆಗೆ ಬಂದಿರುವ ಅಷ್ಟೂ ಕಥೆಗಳಿಗಿಂತಲೂ ಡಿಫರೆಂಟಾಗಿದೆ ಅನ್ನೋದು ಚಿತ್ರತಂಡದ ಭರವಸೆ. ಅದಕ್ಕೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರೋ ಟ್ರೇಲರ್ ಮೂಲಕವೇ ಮತ್ತಷ್ಟು ಶಕ್ತಿ ಸಿಕ್ಕಿದಂತಾಗಿದೆ.

ಕಪಟ ನಾಟಕ ಪಾತ್ರಧಾರಿಯಲ್ಲಿ ಬಾಲು ನಾಗೇಂದ್ರ ಮಧ್ಯಮ ವರ್ಗಕ್ಕಿಂತಲೂ ತುಸು ಕೆಳ ಮಟ್ಟದಲ್ಲಿರೋ ಕುಟುಂಬದ ಹುಡುಗನಾಗಿ ನಟಿಸಿದ್ದಾರೆ. ಆತ ಸೋಮಾರಿಗಳಲ್ಲಿಯೇ ಪರಮ ಸೋಮಾರಿ. ಹಾಗಂತ ಅವನು ಜಡ ಭರತನಲ್ಲ. ಚುರುಕಿನ ಸ್ವಭಾವದ ಈತ ಕೈಯಿಟ್ಟ ಯಾವ ಕೆಲಸವೂ ಬರಖತ್ತಾಗೋದಿಲ್ಲ ಎಂಬ ನಂಬಿಕೆ ಆಸುಪಾಸಿನವರಲ್ಲಿಯೇ ಗಟ್ಟಿಯಾಗುವಂಥಾ ವಿದ್ಯಮಾನಗಳು ಜರುಗುತ್ತಿರುತ್ತವೆ. ಅಷ್ಟಕ್ಕೂ ಈತನಿಗೆ ಸರಿಯಾದೊಂದು ಕೆಲಸ ಹಿಡಿದು ಮೈ ಮುರಿದು ದುಡಿಯೋ ಕಾನ್ಸೆಪ್ಟಿನಲ್ಲಿಯೇ ಒಲವಿರೋದಿಲ್ಲ. ಆದರೆ ಬದುಕು ಬಿಡಬೇಕಲ್ಲಾ? ಅದರ ಅನಿವಾರ್ಯತೆಗೆ ಸಿಕ್ಕು ಆಟೋ ಓಡಿಸಿಕೊಂಡು ಬದುಕ ಬೇಕಾಗಿ ಬಂದಾಗ ಅಲ್ಲಾಗೋ ಸ್ಥಿತ್ಯಂತರಗಳನ್ನು ಮಜವಾದ ಕಥೆಯೊಂದಿಗೆ ಇಲ್ಲಿ ನಿರೂಪಿಸಲಾಗಿದೆ.

ಹೀಗೆ ಅನಿವಾರ್ಯವಾಗಿ ಆಟೋ ಚಾಲಕನಾಗೋ ನಾಯಕ ಯಾವುದೋ ಕಪಟ ನಾಟಕದ ಪಾತ್ರಧಾರಿಯಾಗ ಬೇಕಾಗಿ ಬರುತ್ತದೆ. ಅದುವೇ ಆತನನ್ನು ಸಂಕಷ್ಟದ ಹುದುಲೊಳಗೆ ಹೂತು ಬಿಡುತ್ತದೆ. ಇದರ ನಡುವೆಯೇ ಈ ಆಟೋ ಚಾಲಕ ಪ್ರೇಮಿಯಾಗುತ್ತಾನೆ. ಅಲ್ಲಲ್ಲಿ ನಗಿಸುತ್ತಾನೆ. ಕಚಗುಳಿ ಇಡುತ್ತಾನೆ. ಇಂಥಾ ಮನೋರಂಜನಾತ್ಮಕವಾದ ಗಟ್ಟಿ ಕಥೆ ಹೊಂದಿರೋ ಚಿತ್ರ ಕಪಟ ನಾಟಕ ಪಾತ್ರಧಾರಿ. ಆಟೋ ಚಾಲಕನನ್ನು ಬರಸೆಳೆದುಕೊಳ್ಳೋ ಆ ಘಟನೆ ಯಾವುದು ಎನ್ನುವುದರಿಂದ ಮೊದಲ್ಗೊಂಡು ಎಲ್ಲ ಕುತೂಹಲಗಳಿಗೂ ಇಲ್ಲಿ ಭರಪೂರ ಉತ್ತರ ಸಿದ್ಧವಿದೆ. ಆದರೆ ಅದಕ್ಕಾಗಿ ನವೆಂಬರ್ 8ರ ವರೆಗೆ ಕಾಯಬೇಕಷ್ಟೆ!

Share This Article
Leave a Comment

Leave a Reply

Your email address will not be published. Required fields are marked *