ಪ್ರೀತಿಯ ಶ್ವಾನದ ಮೂಲಕ ಜೀವನದ ಮೌಲ್ಯ ತಿಳಿಸಲು ಹೊರಟ ಸುಧಾಮೂರ್ತಿ

Public TV
1 Min Read

ನವದೆಹಲಿ: ಖ್ಯಾತ ಬರಹಗಾರ್ತಿ ಹಾಗೂ ಇನ್ಫೋಸಿಸ್ ಫೌಂಡೇಶನ್‍ನ ಮುಖ್ಯಸ್ಥೆ ಸುಧಾಮೂರ್ತಿ ಅವರು ತಾವು ಮುದ್ದಾಗಿ ಸಾಕಿರುವ ಶ್ವಾನ ಗೋಪಿ ಮೂಲಕ ಜೀವನದ ಮೌಲ್ಯಗಳ ಕಥೆಯನ್ನು ತಿಳಿಸಲಿದ್ದಾರೆ.

ಸುಧಾಮೂರ್ತಿ ಅವರು ಸರಳ ಜೀವಿ. ಎಷ್ಟೇ ಶ್ರೀಮಂತಿಕೆ ಇದ್ದರೂ ಅದನ್ನು ತೋರಿಸದೆ ಸರಳವಾಗಿ ಎಲ್ಲರೊಳಗೊಂದಾಗಿ ಬದುಕು ಸಾಗಿಸುತ್ತಿರುವವರು. ಇವರು ಯುವ ಪೀಳಿಗೆಗೆ ಸ್ಫೂರ್ತಿ, ಕರ್ನಾಟಕದ ಹೆಮ್ಮೆಯಾಗಿದ್ದಾರೆ. `ದಿ ಗೋಪಿ ಡೈರೀಸ್’ ಎಂಬ ಮೂರು ಪುಸ್ತಕಗಳ ಸರಣಿಯನ್ನು ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಿಸುತ್ತಿದ್ದು, ಈ ಪುಸ್ತಕ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪ್ರಕಟವಾಗಲಿದೆ. ಈ `ದಿ ಗೋಪಿ ಡೈರೀಸ್’ ಪುಸ್ತಕವು ವಿಶೇಷವಾಗಿ ಮಕ್ಕಳಿಗಾಗಿಯೇ ಬರೆಯಲಾಗಿದ್ದು, ತಾವು ಸಾಕಿರುವ ಮುದ್ದಿನ ಶ್ವಾನ ಗೋಪಿ ಮೂಲಕ ಮಕ್ಕಳಿಗೆ ಜೀವನದ ಮೌಲ್ಯವನ್ನು ಸುಧಾಮೂರ್ತಿ ತಿಳಿಸಲಿದ್ದಾರೆ ಎನ್ನಲಾಗಿದೆ.

ಈ ಪುಸ್ತಕವನ್ನು ಸುಧಾಮೂರ್ತಿ ಅವರು ಸರಳ ಶೈಲಿಯಲ್ಲಿ ಬರೆದಿದ್ದು, ನಾಯಿಯ ದೃಷ್ಟಿಕೋನ ಇಟ್ಟುಕೊಂಡು ಜೀವನದ ಮೂಲ ಮೌಲ್ಯಗಳನ್ನು ತಿಳಿಸಲು ಹೊರಟಿದ್ದಾರೆ. “ಇದು ಯುವ ಜನಾಂಗಕ್ಕೆ ನಾನು ಬರೆಯುತ್ತಿರುವ ಮೊದಲ ಪುಸ್ತಕ. ಅದರಲ್ಲೂ ಪ್ರಾಣಿಗಳನ್ನು ಪ್ರೀತಿಸುವ ಮಕ್ಕಳಿಗಾಗಿಯೇ ಈ ಪುಸ್ತಕ. ನನ್ನ ಪಾಲಿನ ಸಂತೋಷವಾಗಿರುವ ನನ್ನ ಮುದ್ದಿನ ನಾಯಿ ಗೋಪಿಯ ಕುರಿತು ಈ ಪುಸ್ತಕ ಇದೆ” ಎಂದು ಸುಧಾಮೂರ್ತಿ ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.

https://twitter.com/HarperCollinsIN/status/1149565390504095745

ಈ ಕಥೆ ಮೂರು ಭಾಗದಲ್ಲಿ ಇದ್ದು, ಗೋಪಿ ಮನೆಗೆ ಬರುವುದರಿಂದ ಕತೆ ಆರಂಭವಾಗುತ್ತದೆ. ಆ ಮನೆಯಲ್ಲಿ ಹೇಗೆ ಬಾಳುತ್ತದೆ, ತನ್ನ ಸುತ್ತಲಿನ ಜಗತ್ತನ್ನು ಗೋಪಿ ಹೇಗೆ ನೋಡುತ್ತಾನೆ ಎನ್ನುವ ಕಾಲ್ಪನಿಕ ಕಥೆ ಇದಾಗಿದೆ.

ಈ ಬಗ್ಗೆ ಹಾರ್ಪರ್ ಕಾಲಿನ್ಸ್ ಇಂಡಿಯಾದಲ್ಲಿ ಮಕ್ಕಳ ಪ್ರಕಾಶಕರಾದ ಟೀನಾ ನರಂಗ್ ಅವರು ಮಾತನಾಡಿ, “ಮಕ್ಕಳು `ದಿ ಗೋಪಿ ಡೈರೀಸ್’ ಪುಸ್ತಕವನ್ನು ಬಹಳ ಇಷ್ಟ ಪಡುತ್ತಾರೆ. ಸುಧಾಮೂರ್ತಿ ಅವರು ಪುಸ್ತಕಗಳನ್ನು ಬರೆಯುವಾಗ ಮನಸ್ಸಿಟ್ಟು ಬರೆಯುತ್ತಾರೆ. ಅದರಲ್ಲೂ ಅವರಿಗೆ ಪ್ರೀತಿಪಾತ್ರವಾಗಿರುವ ಗೋಪಿ ಕುರಿತು ಬರೆಯುವಾಗ ಇನ್ನೂ ಹೆಚ್ಚು ಆಸಕ್ತಿ ತೋರುತ್ತಾರೆ. ಆದ್ದರಿಂದ ಈ ಕಥೆ ಇನ್ನಷ್ಟು ಆಕರ್ಷಕವಾಗಿ ಮೂಡಿಬರಲಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *