ರೋಚಕ ಕದನದಲ್ಲಿ ಹರಿಣರ ಬೇಟೆಯಾಡಿದ ಕಾಂಗರೂ ಪಡೆ – ಫೈನಲ್‌ನಲ್ಲಿ ಭಾರತ-ಆಸೀಸ್‌ ಮುಖಾಮುಖಿ

Public TV
4 Min Read

* 6 ಕ್ಯಾಚ್‌, 1 ರನೌಟ್‌ ಕೈಚೆಲ್ಲಿದ ದಕ್ಷಿಣ ಆಫ್ರಿಕಾ
* ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ
* ಡೇವಿಡ್‌ ಮಿಲ್ಲರ್‌ ಶತಕದ ಏಕಾಂಗಿ ಹೋರಾಟ ವ್ಯರ್ಥ
* 8ನೇ ಬಾರಿ ಆಸ್ಟ್ರೇಲಿಯಾ ವಿಶ್ವಕಪ್‌ ಫೈನಲ್‌ಗೆ ಎಂಟ್ರಿ

ಕೋಲ್ಕತ್ತಾ: ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಜಿದ್ದಾ-ಜಿದ್ದಿ ಕಣದಲ್ಲಿ ಬಲಿಷ್ಠ ಆಸ್ಟ್ರೇಲಿಯಾ (Australia) ತಂಡ ದಕ್ಷಿಣ ಆಫ್ರಿಕಾ (South Africa) ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಾ 8ನೇ ಬಾರಿಗೆ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ್ದು, ನವೆಂಬರ್‌ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ (Team India) ವಿರುದ್ಧ ಸೆಣಸಲಿದೆ.

ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ 2ನೇ ಸೆಮಿಫೈನಲ್‌ ಪಂದ್ಯವು ಅತ್ಯಂತ ರೋಚಕತೆಯಿಂದ ಕೂಡಿತ್ತು. ಆರಂಭದಲ್ಲೇ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಮುಂದಾದ ಟ್ರಾವಿಸ್‌ ಹೆಡ್‌ ಹಾಗೂ ಡೇವಿಡ್‌ ವಾರ್ನರ್‌ ಜೋಡಿ 6.1 ಓವರ್‌ಗಳಲ್ಲಿ 60 ರನ್‌ಗಳ ಜೊತೆಯಾಟ ನೀಡಿತ್ತು. ಅಲ್ಲದೇ ಟ್ರಾವಿಸ್‌ ಹೆಡ್‌ ಸ್ಫೋಟಕ ಬ್ಯಾಟಿಂಗ್‌ ಹರಿಣರನ್ನು ಕಂಗಾಲಾಗುವಂತೆ ಮಾಡಿತ್ತು. 15 ಓವರ್‌ಗಳಲ್ಲಿ 109 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ ಪಡೆ ಬಳಿಕ ಹರಿಣರ ಸ್ಪಿನ್‌ ದಾಳಿಯಿಂದ ನಿಧಾನಗತಿಯ ಬ್ಯಾಟಿಂಗ್‌ಗೆ ಮುಂದಾಯಿತು. ಪ್ರಮುಖ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ವಿಕೆಟ್‌ ಕಳೆದುಕೊಂಡ ಪರಿಣಾಮ ಪಂದ್ಯದ ಫಲಿತಾಂಶವೇ ಬುಡಮೇಲಾಗಿತ್ತು. ಒಂದೊಂದು ರನ್‌ ಕದಿಯಲೂ ಆಸೀಸ್‌ ತಂಡ ಹೆಣಗಾಡಿತ್ತು. ದಕ್ಷಿಣ ಆಫ್ರಿಕಾ ತಂಡವೇ ಗೆಲುವು ಸಾಧಿಸುವ ಸಾಧ್ಯತೆಗಳಿತ್ತು. ಆದ್ರೆ ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ತಂಡದ ಸೋಲಿಗೆ ಕಾರಣವಾಯಿತು.

2015ರ ವಿಶ್ವಕಪ್‌ ಟೂರ್ನಿಯಲ್ಲೂ ದಕ್ಷಿಣ ಆಫ್ರಿಕಾ, ಕಿವೀಸ್‌ ವಿರುದ್ಧ ಇದೇ ರೀತಿ ವಿರೋಚಿತ ಸೋಲಿಗೆ ತುತ್ತಾಗಿತ್ತು. ಕ್ರಿಕೆಟ್‌ ದಿಗ್ಗಜ ಎಬಿಡಿ ವಿಲಿಯರ್ಸ್‌ ಸೇರಿದಂತೆ ಇತರ ಆಟಗಾರರು ಮೈದಾನದಲ್ಲೇ ಕಣ್ಣೀರಿಟ್ಟಿದ್ದರು. ಅಂದು ಮಳೆಯ ಕಾರಣದಿಂದಾಗಿ ಓವರ್‌ ಕಡಿತಗೊಳಿಸಲಾಗಿತ್ತು. ದಕ್ಷಿಣ ಆಫ್ರಿಕಾ 43 ಓವರ್‌ಗಳಲ್ಲಿ 5 ವಿಕೆಟ್‌ಗೆ 281 ರನ್‌ ಗಳಿಸಿತ್ತು. ಆ ನಂತರವೂ ಮಳೆಬಂದಿದ್ದರಿಂದ ಡಕ್ವರ್ತ್‌ ಲೂಯಿಸ್‌ ನಿಯಮದ ಅನ್ವಯ ನ್ಯೂಜಿಲೆಂಡ್‌ಗೆ 43 ಓವರ್‌ಗಳಲ್ಲೇ 298 ರನ್‌ಗಳ ಗುರಿ ನೀಡಲಾಗಿತ್ತು. ಆದ್ರೆ ಹರಿಣರ ಬಳಗದ ಕಳಪೆ ಫೀಲ್ಡಿಂಗ್‌ನಿಂದಾಗಿ ವಿರೋಚಿತ ಸೋಲಿಗೆ ತುತ್ತಾದರು. ಇಂದು ಸಹ ಆರಂಭದಲ್ಲೇ ಕ್ಯಾಚ್‌ಗಳನ್ನ ಕೈಚೆಲ್ಲಿದರು, ಅಲ್ಲದೇ ಅಗ್ರ ಕ್ರಮಾಂಕದ ಬ್ಯಾಟರ್ಸ್‌ಗಳ ವೈಫಲ್ಯದಿಂದ ಮತ್ತೊಮ್ಮೆ ಚೋಕರ್ಸ್‌ ಹಣೆಪಟ್ಟಿಯೊಂದಿಗೆ 2023ರ ವಿಶ್ವಕಪ್‌ಗೆ ವಿದಾಯ ಹೇಳಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟ್‌ ಆಯಿತು. 213 ರನ್‌ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 47.2 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 215 ರನ್‌ ಗಳಿಸಿ ಗೆಲುವು ಸಾಧಿಸಿತು. ಆಸೀಸ್‌ ಪರ ಟ್ರಾವಿಸ್‌ ಹೆಡ್‌ 62 ರನ್‌ (48 ಎಸೆತ, 9 ಬೌಂಡರಿ, 2 ಸಿಕ್ಸರ್)‌, ಡೇವಿಡ್‌ ವಾರ್ನರ್‌ 29 ರನ್‌ (18 ಎಸೆತ, 4 ಸಿಕ್ಸರ್‌, 1 ಬೌಂಡರಿ), ಸ್ವೀವನ್‌ ಸ್ಮಿತ್‌ 30 ರನ್‌ (62 ಎಸೆತ ), ಮಾರ್ನಸ್‌ ಲಾಬುಶೇನ್‌ 18 ರನ್‌, ಮ್ಯಾಕ್ಸ್‌ವೆಲ್‌ 1 ರನ್‌ ಗಳಿಸಿದ್ರೆ ಮಿಚೆಲ್‌ ಮಾರ್ಷ್‌ ಶೂನ್ಯ ಸುತ್ತಿದರು. ಕೊನೆಯಲ್ಲಿ ಜವಾಬ್ದಾರಿ ಬ್ಯಾಟಿಂಗ್‌ ಮಾಡಿದ ಜಾಸ್‌ ಇಂಗ್ಲಿಸ್‌ 28 ರನ್‌, ಮಿಚೆಲ್‌ ಸ್ಟಾರ್ಕ್‌ 16 ರನ್‌ ಹಾಗೂ ಪ್ಯಾಟ್‌ ಕಮ್ಮಿನ್ಸ್‌ 14 ರನ್‌ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೋಟ್ಜಿ, ತಬ್ರೈಜ್ ಶಮ್ಸಿ ತಲಾ 2 ವಿಕೆಟ್‌ ಕಿತ್ತರೆ, ಕಾಗಿಸೊ ರಬಾಡ, ಏಡನ್‌ ಮಾರ್ಕ್ರಮ್‌, ಕೇಶವ್‌ ಮಹಾರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ರೋಚಕ ಕದನದಲ್ಲಿ ಹರಿಣರ ಬೇಟೆಯಾಡಿದ ಕಾಂಗರೂ ಪಡೆ – ಫೈನಲ್‌ನಲ್ಲಿ ಭಾರತ-ಆಸೀಸ್‌ ಮುಖಾಮುಖಿ

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಆಸ್ಟ್ರೇಲಿಯಾ ಬೌಲರ್‌ಗಳ ಮಾರಕ ದಾಳಿಗೆ ನಲುಗಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಹೀನಾಯ ಪ್ರದರ್ಶನ ತೋರಿ ಪೆವಿಲಿಯನ್ ಸೇರಿಕೊಂಡರು. ಪಂದ್ಯದ ಆರಂಭದಿಂದಲೂ ಒಂದು ಅರ್ಧಶತಕವನ್ನೂ ಗಳಿಸದ ನಾಯಕ ತೆಂಬಾ ಬವುಮಾ ಶೂನ್ಯಕ್ಕೆ ಔಟಾಗಿ ನಿರ್ಮಿಸಿದರು. ಈ ಬೆನ್ನಲ್ಲೇ ಲೀಗ್ ಸುತ್ತಿನಲ್ಲಿ 4 ಶತಕ ಸಿಡಿಸಿ ಮಿಂಚಿದ್ದ ಕ್ವಿಂಟನ್ ಡಿಕಾಕ್ ಕೇವಲ 3 ರನ್‌ಗಳಿಗೆ, ರಾಸಿ ವಾನ್ ಡೇರ್ ಡುಸ್ಸೆನ್ 6 ರನ್ ಮತ್ತು ಏಡನ್ ಮಾರ್ಕ್ರಮ್ 10 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. 11.5 ಓವರ್‌ಗಳಾದರೂ ಕೇವಲ 24 ರನ್ ಗಳಿಸಿದ ದಕ್ಷಿಣ ಆಫ್ರಿಕಾ ತಂಡ ಪ್ರಮುಖ 4 ವಿಕೆಟ್‌ಗಳನ್ನೂ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಇದನ್ನೂ ಓದಿ: ಇನ್ಮುಂದೆ ನಿಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಬಹುದು – ಬಾಬರ್‌ ಆಜಂ ಹೊಗಳಿದ ಬೆಂಗ್ಳೂರು ಮೂಲದ ರಚಿನ್‌

ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. 113 ಎಸೆತಗಳಲ್ಲಿ ಈ ಜೋಡಿ 95 ರನ್‌ಗಳ ಜೊತೆಯಾಟ ನೀಡಿತು. ಅಷ್ಟರಲ್ಲೇ ಟ್ರಾವಿಸ್ ಹೆಡ್ ಸ್ಪಿನ್ ದಾಳಿಗೆ ಹೆನ್ರಿಚ್ ಕ್ಲಾಸೆನ್ ವಿಕೆಟ್ ಒಪ್ಪಿಸಿದರು. ಆ ಬಳಿಕ ಡೇವಿಡ್ ಮಿಲ್ಲರ್ ಒಬ್ಬರೇ ಏಕಾಂಗಿ ಹೋರಾಟ ನಡೆಸಿದರು. ಕೊನೆಯವರೆಗೂ ಹೋರಾಡಿದ ಮಿಲ್ಲರ್ 101 ರನ್ (5 ಸಿಕ್ಸರ್, 8 ಬೌಂಡರಿ) ಸಿಡಿಸಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಇದರ ಹೊರತಾಗಿ ಜೆರಾಲ್ಡ್ ಕೋಟ್ಜಿ 19 ರನ್, ಕೇಶವ್ ಮಹಾರಾಜ್ 4 ರನ್, ಕಾಗಿಸೋ ರಬಾಡ, 10 ರನ್, ತಬ್ರೈಜ್ ಶಮ್ಸಿ 1 ರನ್ ಗಳಿಸಿದರು. ವೈಡ್ ನೋಬಾಲ್‌ನಿಂದ ತಂಡಕ್ಕೆ ಹೆಚ್ಚುವರಿ 11 ರನ್ ಸೇರ್ಪಡೆಯಾಯಿತು. ಹರಿಣರ ವಿರುದ್ಧ ಮಾರಕ ದಾಳಿ ನಡೆಸಿದ ಆಸೀಸ್ ಪರ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಜೋಶ್ ಹ್ಯಾಜಲ್ವುಡ್ ಮತ್ತು ಟ್ರಾವಿಸ್ ಹೆಡ್ ತಲಾ 2 ವಿಕೆಟ್ ಪಡೆದು ಮಿಂಚಿದರು.

Share This Article