ಬೆತ್‌ ಮೂನಿ ಭರ್ಜರಿ ಫಿಫ್ಟಿ – ಆಸ್ಟ್ರೇಲಿಯಾಗೆ 6ನೇ ಬಾರಿಗೆ ವಿಶ್ವಕಪ್‌ ಚಾಂಪಿಯನ್‌ ಕಿರೀಟ

Public TV
2 Min Read

ಕೇಪ್‌ಟೌನ್‌: ಬೆತ್‌ ಮೂನಿ (Beth Mooney) ಅವರ ಅಜೇಯ ಅರ್ಧಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ‌ ಮಹಿಳಾ (Australia Womens Cricket Team) ತಂಡ ದಕ್ಷಿಣ ಆಫ್ರಿಕಾ ವಿರುದ್ಧ 19 ರನ್‌ ಗಳ ಜಯ ಸಾಧಿಸಿದ್ದು, 6ನೇ ಬಾರಿಗೆ ವಿಶ್ವಕಪ್‌ ಕಿರೀಟ ಧರಿಸಿದೆ.

ಆಸ್ಟ್ರೇಲಿಯಾ 2010ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ನಂತರ 2012, 2014ರಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್‌ ವಿಶ್ವಕಪ್‌ ಕಿರೀಟ ಧರಿಸಿತ್ತು. ಆ ನಂತರ 2016ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೋತು ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ನಂತರ 2018, 2020 ರಲ್ಲಿ ವಿಶ್ವಕಪ್‌ ಗೆದ್ದಿದ್ದ ಆಸ್ಟ್ರೇಲಿಯಾ ಇದೀಗ 2023ರಲ್ಲೂ ಜಯಭೇರಿ ಬಾರಿಸಿದ್ದು 6ನೇ ಬಾರಿಗೆ ಟಿ20 ವಿಶ್ವಕಪ್‌ ತನ್ನದಾಗಿಸಿಕೊಂಡಿದೆ.

ದಕ್ಷಿಣ ಆಫ್ರಿಕಾದ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ ದಕ್ಷಿಣ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 156 ರನ್‌ ಕಲೆಹಾಕಿತು. 157 ರನ್‌ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ (South Africa Womens) 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 137 ರನ್‌ಗಳಷ್ಟೇ ಗಳಿಸಲು ಸಾಧ್ಯವಾಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಹಸಿರು ಉಡುಗೆಯಲ್ಲಿ ಸಪ್ನಾ ಶೈನ್ – ಕೊಹ್ಲಿ ಜೊತೆ ಜಗಳವಾಡಿದ್ರೆ ಇನ್ನೂ ಫೇಮಸ್ ಆಗ್ತೀರಿ: ನೆಟ್ಟಿಗರಿಂದ ತರಾಟೆ

157 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲೇ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಮೊದಲ 10 ಓವರ್‌ಗಳಲ್ಲಿ ಕೇವಲ 52 ರನ್‌ಗಳಿಸಿ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆರಂಭಿಕ ಆಟಗಾರ್ತಿ ಲಾರ ವೋಲ್ವರ್ಥ್ (Laura Wolvaardt) 61 ರನ್‌ (5 ಬೌಂಡರಿ, 3 ಸಿಕ್ಸರ್‌), ಚೊಲೆ ಟ್ರಿಯಾನ್ 25 ರನ್‌ಗಳಿಸಿದರು. ಉಳಿದ ಯಾರೊಬ್ಬರೂ ಸ್ಥಿರವಾಗಿ ನಿಲ್ಲದ ಕಾರಣ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿತು. ಇದನ್ನೂ ಓದಿ: ಅಂದು ಧೋನಿ, ಇಂದು ಕೌರ್ – ವಿಶ್ವಕಪ್ ಕನಸು ಭಗ್ನಗೊಳಿಸಿದ ಆ ಒಂದು ರನೌಟ್

ಇದಕ್ಕೂ ಮುನ್ನ ಟಾಸ್‌ಗೆದ್ದು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದರೂ ಡೆತ್‌ ಓವರ್‌ನಲ್ಲಿ ಭರ್ಜರಿ ರನ್‌ ಕಲೆ ಹಾಕಿತು. ಆರಂಭಿಕರಾದ ಅಲಿಸ್ಸಾ ಹೀಲಿ 20 ಎಸೆತಗಳಲ್ಲಿ 18 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ಬೆತ್ ಮೂನಿ ಮಾತ್ರ ಕೊನೆಯವರೆಗೂ ಸ್ಫೋಟಕ ಬ್ಯಾಟಿಂಗ್‌ ಮಾಡುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದರು. 53 ಎಸೆತಗಳಲ್ಲಿ 9 ಬೌಂಡರಿ 1 ಸಿಕ್ಸರ್ ಸಹಿತ 74 ರನ್ ಚಚ್ಚಿ ಆಸ್ಟ್ರೇಲಿಯಾ ತಂಡ ಸವಾಲಿನ ಮೊತ್ತ ಕಲೆಹಾಕಲು ಕಾರಣವಾದರು. ಇದಕ್ಕೆ ಸಾಥ್‌ ನೀಡಿದ ಆಲ್‌ರೌಂಡರ್‌ ಆಶ್ಲೆ ಗಾರ್ಡ್ನರ್ (Ashleigh Gardner) 21 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 29 ರನ್ ಚಚ್ಚಿದರು.

ದಕ್ಷಿಣ ಆಫ್ರಿಕಾ ಪರ ಶಬ್ನಿಮ್ ಇಸ್ಮಾಯಿಲ್ 4 ಓವರ್ ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಮಾರಿಜನ್ನೆ ಕಪ್ ಕೂಡ 2 ವಿಕೆಟ್ ಪಡೆದರು. ನಾನ್‌ಕುಲುಲೆಕೊ ಮ್ಲಾಬಾ ಮತ್ತು ಕ್ಲೋಯ್ ಟ್ರಯಾನ್ ತಲಾ ಒಂದು ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *