Aurangzeb Tomb Row| ಧರ್ಮಗ್ರಂಥ ಸುಟ್ಟ ವದಂತಿಯಿಂದ ನಾಗ್ಪುರದಲ್ಲಿ ಹಿಂಸಾಚಾರ, ಕರ್ಫ್ಯೂ ಜಾರಿ

Public TV
2 Min Read

ಮುಂಬೈ: ಔರಂಗಜೇಬನ ಸಮಾಧಿ (Aurangzeb Tomb) ತೆರವಿಗೆ ಆಗ್ರಹಿಸಿ ವಿವಿಧ ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಕುರಾನ್‌ ಸುಟ್ಟಿದ್ದಾರೆ ಎಂದು ವದಂತಿ ಹರಡಿದ್ದರಿಂದ ನಾಗ್ಪುರದಲ್ಲಿ ಸೋಮವಾರ ರಾತ್ರಿ (ಮಾ.17) ಹಿಂಸಾಚಾರ (Nagpur Violence) ನಡೆದಿದೆ.

ಹಿಂಸಾಚಾರದ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರ ತಡೆಗೆ ಪೊಲೀಸರು ಆಶ್ರುವಾಯು ಸಿಡಿಸಿ, ಲಾಠಿಪ್ರಹಾರ ನಡೆಸಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ.

 

ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಿದ ನಂತರ ಹಿಂಸಾಚಾರ ನಿಂತಿದ್ದು ಸದ್ಯ ಪರಿಸ್ಥಿತಿ ಶಾಂತವಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 163 ರ ಅಡಿಯಲ್ಲಿ ನಾಗ್ಪುರ ನಗರದ ಹಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ.

ಕೊತ್ವಾಲಿ, ಗಣೇಶಪೇಠ, ತಹಸಿಲ್, ಲಕಡ್ಗಂಜ್, ಪಚ್ಪಾವೋಲಿ, ಶಾಂತಿನಗರ, ಸಕ್ಕರ್ದಾರ, ನಂದನ್ವನ್, ಇಮಾಮ್ವಾಡ, ಯಶೋಧರನಗರ ಮತ್ತು ಕಪಿಲ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಾಗಿದೆ.

ಹಿಂಸಾಚಾರ ನಡೆದ ಬೆನ್ನಲ್ಲೇ ಸಿಎಂ ದೇವೇಂದ್ರ ಫಡ್ನವೀಸ್ (Devendra Fadnavis) ಶಾಂತಿಗಾಗಿ ಮನವಿ ಮಾಡಿದ್ದಾರೆ. ನಾಗ್ಪುರವು ಶಾಂತಿಯುತ ನಗರವಾಗಿದ್ದು, ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.

 

 

ಪ್ರತಿಭಟನೆ ನಡೆಸಿದ್ದು ಯಾಕೆ?
ಔರಂಗಜೇಬ್‌ ನೋವು ಮತ್ತು ಗುಲಾಮಗಿರಿಯ ಸಂಕೇತ. ಹೀಗಾಗಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್‌ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ವಿಎಚ್‌ಪಿ (VHP) ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಸೋಮವಾರ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದ್ದವು.

ನಾಗ್ಪುರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂಘಟನೆಗಳು ಬಾಬ್ರಿ ಮಸೀದಿಯನ್ನು ಉರುಳಿಸಿದಂತೆ ಔರಂಗಜೇಬ್ ಸಮಾಧಿಯನ್ನು ಉರಳಿಸುತ್ತೇವೆ. ಸರ್ಕಾರ ಈ ವಿವಾದಾತ್ಮಕ ಔರಂಗಜೇಬ್ ಸಮಾಧಿ ತೆರವು ಮಾಡದಿದ್ದರೆ ನಾವೇ ತೆರವು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದವು.

ಬಿಗಿ ತಪಾಸಣೆ:
ಹಿಂದೂ ಸಂಘಟನೆಗಳಿಂದ ಸಮಾಧಿ ತೆರವಿಗೆ ಆಗ್ರಹ ಕೇಳಿಬಂದ ಬೆನ್ನಲ್ಲೇ ಸಮಾಧಿ ಸುತ್ತಮುತ್ತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಸಮಾಧಿಗೆ ಭೇಟಿ ನೀಡುವವರ ನೋಂದಣಿ, ಗುರುತಿನ ಚೀಟಿ ಪರಿಶೀಲನೆ ಕಡ್ಡಾಯಗೊಳಿಸಿದೆ.

Share This Article