20 ವರ್ಷದ ಹುಡುಗಿ ಅಂತ 50ರ ಆಂಟಿ ತುಂಟಾಟ – ಚಾಟ್ ಮಾಡಿ ಮೋಸ ಹೋದ ಯುವಕ

Public TV
3 Min Read

– ಹುಡುಗಿ ಅಂತ ತಿಳಿದು ಮದ್ವೆಗೆ ಮುಂದಾಗಿದ್ದ ಯುವಕ
– ಯುವಕನಿಂದ 3 ಲಕ್ಷ ವಸೂಲಿ ಮಾಡಿದ ಆಂಟಿ

ಮಂಡ್ಯ: 50 ವರ್ಷದ ಆಂಟಿ ನಾನಿನ್ನು ಹುಡುಗಿ ನನಗೆ ಇನ್ನೂ ಜಸ್ಟ್ ಸ್ವೀಟ್ 20 ಎಂದು ಹುಡುಗನೊಬ್ಬನಿಗೆ ಫೇಸ್‍ಬುಕ್‍ನಲ್ಲಿ ಚಾಟ್ ಮಾಡಿ ನಿನ್ನೊಂದಿಗೆ ಮದುವೆ ಆಗ್ತೀನಿ ಎಂದು 3 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾಳೆ. ಕೊನೆಗೆ 50 ವರ್ಷದ ಆಂಟಿಯ ಮುಖವಾಡ ಕಳಚಿ ಬಿದ್ದ ನಂತರ ಆ ಹುಡುಗನಿಗೆ ಆಕಾಶವೇ ಕಳಚಿ ಬಿದ್ದಂತಾದ ಪ್ರಕರಣವೊಂದು ಸಕ್ಕರೆ ನಾಡಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಹೌದು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮವೊಂದರ ಯುವಕನಿಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗ್ರಾಮವೊಂದರ ಮಹಿಳೆ ವಂಚಿಸಿದ್ದಾಳೆ. ಕಳೆದ ಮೂರು ತಿಂಗಳ ಹಿಂದೆ ಯುವಕ ಫೇಸ್‍ಬುಕ್‍ನಲ್ಲಿ ಒಂದು ಸುಂದರವಾದ ಡಿಪಿ ಇದ್ದ ಹುಡುಗಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾನೆ. ನಂತರ ಆಕೆಯೊಂದಿಗೆ ಚಾಟ್ ಸಹ ಮಾಡಿದ್ದಾನೆ. ಈ ವೇಳೆ ಆ ಕಡೆಯಿಂದ ನನಗೆ ಇನ್ನೂ ಸ್ವೀಟ್ 20 ವಯಸ್ಸು ಅಷ್ಟೇ ಎಂದೆಲ್ಲಾ ಬಿಲ್ಡಪ್ ಕೊಟ್ಟು ಅಮಾಯಕ ಹುಡುಗನಿಗೆ ಆಕೆಯ ಬಗ್ಗೆ ಕುತೂಹಲ ಮೂಡಿಸುವಂತೆ ಮಹಿಳೆ ಮೆಸೇಜ್ ಮಾಡಿದ್ದಾಳೆ. ನಂತರ ಆಕೆಯ ಮೇಲೆ ಪ್ರೀತಿ ಹುಟ್ಟಿ ಯುವಕ ಲವ್ ಪ್ರಪೆÇೀಸ್ ಮಾಡಿದ್ದಾನೆ. ಇದಕ್ಕೆ ಹುಡುಗಿ ರೂಪದಲ್ಲಿದ್ದ ಆಂಟಿ ಲವ್ ಯು ಟೂ ಎಂದು ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ. ಇದನ್ನೂ ಓದಿ: ಇಂಟರ್‌ವ್ಯೂಗೆಂದು ಹೋದ ಯುವತಿ, ಟ್ಯಾಲಿಕ್ಲಾಸ್‌ಗೆ ಹೋಗ್ತೀನೆಂದಿದ್ದ ಯುವಕ – ಆತ್ಮಹತ್ಯೆಗೂ ಮುನ್ನ ನಡೆದಿದ್ದೇನು?

ಬಳಿಕ ಇಬ್ಬರು ಫೋನ್‍ನಲ್ಲಿ ಸಂಭಾಷಣೆ ನಡೆಸಲು ಆರಂಭಿಸಿದ್ದಾರೆ. ಆ ಆಂಟಿ ಹುಡುಗಿಯಂತೆಯೇ ಮಾತನಾಡಿ ಯುವಕನನ್ನು ನಂಬಿಸುತ್ತಾಳೆ. ನಂತರ ನಮ್ಮ ದೊಡ್ಡಮ್ಮ ನಿಮ್ಮ ಬಳಿ ಮಾತನಾಡಬೇಕು ಅಂತಿದ್ದಾರೆ ಎಂದು ಆಂಟಿ ಯುವಕನ ಜೊತೆ ಆಗಾಗ ಫೋನ್‍ನಲ್ಲಿ ಮಾತಾಡುತ್ತಿರುತ್ತಾಳೆ. ಈ ವೇಳೆ ಅಯ್ಯೋ ನಮ್ಮನೆಯಲ್ಲಿ ತುಂಬಾ ಕಷ್ಟ ಏನ್ ಮಾಡೋದು ಅಂತಾ ಆತನಿಗೆ ಕನಿಕರ ಹುಟ್ಟುವ ಹಾಗೆ ಮಾಡುತ್ತಾಳೆ. ಆಗ ಯುವಕ ಹಣ ಏನಾದರೂ ಬೇಕಾ ಎಂದು ಕೇಳಿದಾಗ, ಈತನಿಂದ ಸುಮಾರು 3 ಲಕ್ಷ ರೂಪಾಯಿವರೆಗೆ ವಸೂಲಿ ಮಾಡಿದ್ದಾಳೆ. ಅಲ್ಲದೇ ತಮ್ಮ ಮನೆಗೆ 50 ಸಾವಿರ ರೂಪಾಯಿವರೆಗೆ ದಿನಸಿಯನ್ನು ತರಿಸಿಕೊಂಡಿದ್ದಾಳೆ.

ಇಷ್ಟೆಲ್ಲಾ ಆದ ನಂತರ ಹುಡುಗಿ ರೂಪದಲ್ಲಿ ಇದ್ದ ಆಂಟಿಗೆ ಆ ಯುವಕ ಮದುವೆ ಆಗಿ ಬಿಡೋಣಾ ಎಂದು ಹೇಳುತ್ತಾನೆ. ಅದಕ್ಕೆ ಆಕೆ ಈಗಲೇ ಬೇಡಾ ಸ್ವಲ್ಪ ದಿನ ಆಗಲಿ ಎಂದಾಗ, ಇಲ್ಲ ಮದುವೆಯಾಗಲೇಬೇಕು ಎಂದು ಯುವಕ ಹಠ ಹಿಡಿದಿದ್ದಾನೆ. ಇದಕ್ಕೆ ಒಪ್ಪಿ ನಮ್ಮ ದೊಡ್ಡಮ್ಮರನ್ನು ನಿಮ್ಮನೆಗೆ ಕಳುಹಿಸುತ್ತೇನೆ ಅಂತಾ ಹೇಳಿದ್ದಾಳೆ. ಇಲ್ಲ ಮೊದಲು ಗಂಡಿನ ಕಡೆಯವರು ಬರಬೇಕು ನಾವೇ ಬರುತ್ತೇವೆ ಎಂದು ಯುವಕ ಹೇಳಿದ್ದಾನೆ. ನಂತರ ನಮ್ಮ ಚಿಕ್ಕಪ್ಪನಿಗೆ ಈ ಮದುವೆ ಇಷ್ಟ ಇಲ್ಲ ಎಂದು ಜಗಳ ಮಾಡುತ್ತಿದ್ದಾರೆ ಎಂದು ಆಕೆ ತಿಳಿಸಿದಾಗ, ಸರಿ ದೊಡ್ಡಮ್ಮಳನ್ನು ಕಳುಹಿಸು ಎಂದು ಯುವಕ ಹೇಳಿದ್ದಾನೆ. ಇದನ್ನೂ ಓದಿ: ಹಿಮಾಚಲ ಉಪಸಭಾಧ್ಯಕ್ಷರಿಂದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಆರೋಪ

ಕೊನೆಗೆ ಆ 50 ವರ್ಷದ ಆಂಟಿಯೇ ನಾಗಮಂಗಲ ತಾಲೂಕಿನಲ್ಲಿರುವ ಯುವಕನ ಮನೆಗೆ ಹೋಗಿ ಮದುವೆ ಮಾತುಕತೆ ನಡೆಸಿದ್ದಾಳೆ. ಈ ವೇಳೆ ಆಕೆ ಶಾಸ್ತ್ರ ಏನು ಬೇಡಾ ನಮ್ಮ ಭಾವ ಜಗಳ ಮಾಡುತ್ತಿದ್ದಾರೆ. ಇಲ್ಲೇ ಎಲ್ಲಾದರೂ ಮದುವೆ ಮಾಡಿಬಿಡೋಣಾ ಎಂದಿದ್ದಾಳೆ. ಇದಕ್ಕೆ ಒಪ್ಪಿದ ಯುವಕನ ಪೋಷಕರು ಹಾಗೂ ಯುವಕ ಚುಂಚನಗಿರಿಯ ಮುಳಕಟ್ಟಮ್ಮ ದೇವಸ್ಥಾನದಲ್ಲಿ ಮದುವೆ ಫಿಕ್ಸ್ ಮಾಡಿದ್ದಾರೆ. ಬಳಿಕ ಯುವಕನ ಮನೆಯವರು ಮದುವೆ ಆಮಂತ್ರಣ ಪತ್ರಿಕೆಯನ್ನು ಪ್ರಿಂಟ್ ಮಾಡಿಸಿ ಸಂಬಂಧಿಕರಿಗೆಲ್ಲಾ ಹಂಚುತ್ತಾರೆ. ಇದಾದ ಬಳಿಕ ಹುಡುಗಿ ರೂಪದಲ್ಲಿದ್ದ ಹುಡುಗಿಗೆ ಯುವಕ ಫೋನ್ ಮಾಡಿ ಮಾತಾಡುವಾಗ ನಿನ್ನ ನೋಡಬೇಕು. ಬಟ್ಟೆ ತೆಗೆದುಕೊಂಡು ಬರೋಣಾ ಎಂದು ಕರೆದಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ.

ನಂತರ ಆಕೆಯ ವರ್ತನೆ ಬಗ್ಗೆ ಅನುಮಾನಗೊಂಡ ಯುವಕ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಆ 50 ವರ್ಷದ ಆಂಟಿಯನ್ನು ಪೊಲೀಸರು ಕರೆಸುತ್ತಾರೆ. ಈ ವೇಳೆ ಚಾಲಾಕಿ ಆಂಟಿ ನನ್ನ ಸಾಕು ಮಗಳನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಮೊಸಳೆ ಕಣ್ಣೀರು ಹಾಕಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಈ ವೇಳೆ ಮಹಿಳಾ ಪೇದೆ ಈಕೆಯ ಕೈಯಲ್ಲಿ ಒಂದು ಮೊಬೈಲ್ ಮತ್ತು ಬ್ಲೌಸ್‍ನಲ್ಲಿದ್ದ ಒಂದು ಮೊಬೈಲ್‍ನ್ನು ಗಮನಿಸಿದ್ದಾರೆ. ಕೊನೆಗೆ ಒಳಗಡೆ ಇದ್ದ ಮೊಬೈಲ್‍ನ್ನು ತೆಗೆದು ನೋಡಿದಾದ ಅದರಲ್ಲಿ ಕಾಲ್ ಡಿಟೈಲ್ಸ್, ಮೆಸೇಜ್ ಎಲ್ಲವನ್ನು ನೋಡಿ ಗಾಬರಿಗೊಂಡ ಪೊಲೀಸರು ಆಕೆಯ ವಿಚಾರಣೆ ನಡೆಸಿದಾಗ, ಈ ಆಂಟಿಯೇ ಆ ಯುವಕನಿಗೆ ಮೋಸ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

POLICE JEEP

ಬಳಿಕ ಮಹಿಳೆಗೆ ಪೊಲೀಸರು ಎಚ್ಚರಿಕೆ ನೀಡಿ, ಯುವಕ ನೀಡಿದ ಹಣವನ್ನು ವಾಪಸ್ ನೀಡುವಂತೆ ಸೂಚಿಸಿದ್ದಾರೆ. ಜೊತೆಗೆ ಯುವಕನಿಗೆ ಬೈದು ಬುದ್ಧಿವಾದ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *