ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್‌ ಮೇಲೆ ಕೇಸ್‌ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌

Public TV
3 Min Read

ಬೆಂಗಳೂರು: ಮಾರತಹಳ್ಳಿಯಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ (Atul Subhash Suicide Case) ಸಂಬಂಧಿಸಿದಂತೆ ಪತ್ನಿ ನಿಕಿತಾ ಸಿಂಘಾನಿಯಾ (Nikita Singhania) ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನಡಿ ಅತುಲ್ ಮಡದಿ ನಿಕಿತಾ ಸಿಂಘಾನಿಯ, ನಿಶಾ ಸಿಂಘಾನಿಯಾ, ಅನುರಾಗ್ ಸಿಂಘಾನಿಯಾ ಹಾಗೂ ಸುಶೀಲ್ ಸಿಂಘಾನಿಯಾ ವಿರುದ್ಧ ಮಾರತಹಳ್ಳಿಯಲ್ಲಿ ಠಾಣೆಯಲ್ಲಿ (Marathahalli Police Station) ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?
ಅತುಲ್ ಸುಭಾಷ್ ಮತ್ತು ನಿಕಿತಾ ಸಿಂಘಾನಿಯ 2019ರಲ್ಲಿ ಮದುವೆಯಾಗಿದ್ದು ಗಂಡು ಮಗು ಇದೆ. ನಿಕಿತಾ ಸಿಂಘಾನಿಯಾ, ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್‌ ಸಿಂಘಾನಿಯಾ ಸಂಬಂಧಿ ಸುಶೀಲ್ ಸಿಂಘಾನಿಯಾ ಸೇರಿ ಅತುಲ್ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಇದನ್ನೂ ಓದಿ: ಮುರುಡೇಶ್ವರದಲ್ಲಿ ಸಮುದ್ರ ಪಾಲಾಗಿದ್ದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಪ್ರಕರಣದ ಇತ್ಯರ್ಥಕ್ಕಾಗಿ 3 ಕೋಟಿ ರೂ.ನೀಡಬೇಕೆಂದು ಒತ್ತಾಯ ಮಾಡಿದ್ದರು. ಅಷ್ಟೇ ಅಲ್ಲದೇ ಮಗನ ಭೇಟಿಗೆ ಅವಕಾಶ ನೀಡಲು 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. 3 ಕೋಟಿ ಹಣ ನೀಡದಿದ್ದರೆ ನೀನು ಬದುಕಬೇಡ. ಆತ್ಮಹತ್ಯೆ ಮಾಡಿಕೋ ಎಂದು ಅಣಕಿಸುತ್ತಿದ್ದರು. ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ನೊಂದು ನನ್ನ ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಕಾಸ್ ಕುಮಾರ್ ದೂರು ನೀಡಿದ್ದಾರೆ.

ಮಾರತಹಳ್ಳಿ ಠಾಣೆ ಪಿಎಸ್‌ಐ ನೇತೃತ್ವದಲ್ಲಿ ತಂಡ ರಚನೆಯಾಗಿದ್ದು ಶೀಘ್ರವೇ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಏನಿದು ಪ್ರಕರಣ?
ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಖಿನ್ನತೆಗೆ ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು ಡಿ.9 ರಂದು ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಡೆಪ್ಯೂಟಿ ಮ್ಯಾನೇಜರ್‌ ಆಗಿದ್ದ ಇವರು ಸುಮಾರು 40 ಪುಟಗಳ ಡೆತ್ ನೋಟ್ ಬರೆದಿದ್ದ ಇವರು, ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿ ತಾನು ಅನುಭವಿಸಿದ್ದ ಸಂಕಷ್ಟಗಳನ್ನು ವಿವರಿಸಿದ್ದರು.

ಸುಭಾಷ್‌ ಹೇಳಿದ್ದೇನು?
ಪತ್ನಿ ನಿಖಿತಾ ಹಾಗೂ ಆಕೆಯ ಮನೆಯವರು ಚಿತ್ರಹಿಂಸೆ ನೀಡುತ್ತಿದ್ದರು. ನಾನು ಯಾವುದೇ ತಪ್ಪು ಮಾಡದೇ ಇದ್ದರೂ ನನ್ನ ಮೇಲೆ 9 ಪ್ರಕರಣ ದಾಖಲಿಸಿದ್ದರು. ಆರು ಪ್ರಕರಣ ಕೆಳ ನ್ಯಾಯಾಲಯದಲ್ಲಿದ್ದರೆ ಮೂರು ಪ್ರಕರಣಗಳು ಹೈಕೋರ್ಟ್‌ನಲ್ಲಿದೆ. ನಾನು ಬೆಂಗಳೂರಿನಲ್ಲಿದ್ದರೂ 9 ಪ್ರಕರಣಗಳ ವಿಚಾರಣೆಗಾಗಿ ಪದೇ ಪದೇ ಉತ್ತರ ಪ್ರದೇಶಕ್ಕೆ ಹೋಗಬೇಕಿತ್ತು. ಪತ್ನಿ ಕುಟುಂಬದವರ ಹಣದ ಬೇಡಿಕೆಯನ್ನು ಈಡೇರಿಸಿ ನನಗೆ ಸಾಕಾಗಿ ಹೋಗಿದೆ. ನಾನು ದುಡಿದ ಹಣವನ್ನು ಶತ್ರುಗಳಿಗೆ ನೀಡುತ್ತಿದ್ದೆ. ನನ್ನ ದುಡ್ಡಿನಿಂದ ಬಲವಾಗುತ್ತಿದ್ದ ಅವರು ಮತ್ತೆ ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ಒಂದು ಬಾರಿ ಒಂದು ಪ್ರಕರಣವನ್ನು ಪತ್ನಿ ವಾಪಸ್ ಪಡೆದಿದ್ದಳು. ವಾಪಸ್‌ ಪಡೆದ ನಂತರ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಳು.

ಹಣ ಪಡೆಯಲೆಂದೇ ನನ್ನ ಮೇಲೆ ಸಾಲು ಸಾಲು ಪ್ರಕರಣ ದಾಖಲಾಗುತ್ತಿದ್ದರೂ ಕೋರ್ಟ್‌ ಪತ್ನಿಯ ಪರವಾಗಿಯೇ ಇರುವಂತೆ ವರ್ತಿಸಿತ್ತು. ಉತ್ತರ ಪ್ರದೇಶದ ಕೋರ್ಟ್‌ಗಿಂತಲೂ ಬೆಂಗಳೂರಿನ ಕೋರ್ಟ್‌ಗಳು ಹೆಚ್ಚು ನ್ಯಾಯದ ಪರವಾಗಿವೆ. ನನ್ನ ಎಲ್ಲಾ ಕೇಸ್‌ಗಳನ್ನು ಕರ್ನಾಟಕದಲ್ಲಿ ನಡೆಸಬೇಕು ಎನ್ನುವುದು ನನ್ನ ಮನವಿ. ನ್ಯಾಯ ಸಿಗಬೇಕು ಎನ್ನುವ ಕಾರಣಕ್ಕೆ  ವಿಚಾರಣೆ ಮುಗಿಯುವವರೆಗೂ ಪತ್ನಿಯನ್ನು ಬೆಂಗಳೂರಿನಲ್ಲಿಯೇ ನ್ಯಾಯಾಂಗ ಬಂಧನದಲ್ಲಿ ಇಡಬೇಕು.

ಉತ್ತರಪ್ರದೇಶದ ಜೌನ್‌ಪುರದಲ್ಲಿ ಅತುತ್‌ ಸುಭಾಷ್ ಪರವಾಗಿ ವಾದಿಸಿದ್ದ ವಕೀಲ ಅವಧೇಶ್ ತಿವಾರಿ ಪ್ರತಿಕ್ರಿಯಿಸಿ, ವರದಕ್ಷಿಣೆ, ಹಲ್ಲೆ ಮತ್ತು ಜೀವನಾಂಶದ ಆರೋಪಕ್ಕೆ ಸಂಬಂಧಿಸಿದಂತೆ ಕೇಸ್‌ ದಾಖಲಾಗಿದೆ. ಜುಲೈ 2024 ರಲ್ಲಿ ನ್ಯಾಯಾಲಯದ ಮಗನ ಪೋಷಣೆಗಾಗಿ ಮಾಸಿಕ 40,000 ರೂ. ಪಾವತಿಸುವಂತೆ ಆದೇಶಿಸಿತ್ತು. ಆದರೆ ಪತ್ನಿ ಮಾಡಿದ ಹೆಚ್ಚುವರಿ ಬೇಡಿಕೆಗಳನ್ನು ತಿರಸ್ಕರಿಸಿತ್ತು ಎಂದು ಹೇಳಿದ್ದಾರೆ.

 

Share This Article