ಎರಡೂವರೆ ಗಂಟೆ ಕಾರು ಚಲಾಯಿಸಿಕೊಂಡು ಹೋಗಿ ‘ಕಾಂತಾರ ಚಾಪ್ಟರ್‌ 1’ ನೋಡಿದ ಅಟ್ಲೀ

Public TV
2 Min Read

– ರಿಷಬ್‌ ಶೆಟ್ಟಿಗೆ ಮತ್ತೆ ರಾಷ್ಟ್ರೀಯ ಪ್ರಶಸ್ತಿ ಸಿಗಬೇಕು ಎಂದ ಖ್ಯಾತ ನಿರ್ದೇಶಕ

ಶಾರುಖ್‌ ಖಾನ್‌ ಅಭಿನಯದ ‘ಜವಾನ್’‌ ಸಿನಿಮಾ ಅದ್ಭುತ ಯಶಸ್ಸಿನ ನಂತರ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಿರ್ದೇಶಕರಾಗಿರುವ ಅಟ್ಲೀ, ಕಾಂತಾರ ಚಾಪ್ಟರ್‌ 1 (Kantara Chapter 1) ಸಿನಿಮಾವನ್ನು ಹಾಡಿಹೊಗಳಿಸಿದ್ದಾರೆ. ಎರಡೂವರೆ ಗಂಟೆಗಳ ಕಾಲ ನಾನೇ ಕಾರು ಚಲಾಯಿಸಿಕೊಂಡು ಹೋಗಿ ಕಾಂತಾರ ಸಿನಿಮಾ ನೋಡಿದ್ದೇನೆಂದು ಅಟ್ಲೀ ಹೇಳಿಕೊಂಡಿದ್ದಾರೆ.

‘ಪುಷ್ಪ’ ತಾರೆ ಅಲ್ಲು ಅರ್ಜುನ್ ಅವರೊಂದಿಗಿನ ತಮ್ಮ ಮುಂಬರುವ ಚಿತ್ರದ ಕೆಲಸದಲ್ಲಿ ಅಟ್ಲೀ (Atlee) ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲೇ, ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ‘ಕಾಂತಾರ ಚಾಪ್ಟರ್‌ 1’ ಸಿನಿಮಾ ನೋಡಲು ಆಮ್ಸ್ಟರ್‌ಡ್ಯಾಮ್‌ನಲ್ಲಿ ಎರಡೂವರೆ ಗಂಟೆಗಳ ಕಾಲ ತಾನೇ ಕಾರು ಚಲಾಯಿಸಿದ್ದಾಗಿ ಅಟ್ಲೀ ತಿಳಿಸಿದ್ದಾರೆ. ಇದನ್ನೂ ಓದಿ: ಬಾಕ್ಸಾಫೀಸ್‌ನಲ್ಲಿ ಕಾಂತಾರ ಚಾಪ್ಟರ್‌ 1 ಮಿಂಚಿನ ಓಟ – ಸಿದ್ಧಿವಿನಾಯಕನ ದರ್ಶನ ಪಡೆದ ರಿಷಬ್‌

ಚಿತ್ರ ಬಿಡುಗಡೆಯಾದಾಗ ನಾನು ಆಮ್ಸ್ಟರ್‌ಡ್ಯಾಮ್‌ನಲ್ಲಿದ್ದೆ. ಮೊದಲ ದಿನವೇ ನಾನು ಅದನ್ನು ಚಿತ್ರಮಂದಿರದಲ್ಲಿ ನೋಡಿದೆ. ಸಿನಿಮಾ ನೋಡಬೇಕು ಅಂತ ಸುಮಾರು ಎರಡೂವರೆ ಗಂಟೆಗಳ ಕಾಲ ನಾನೇ ಕಾರು ಚಲಾಯಿಸಿಕೊಂಡು ಥಿಯೇಟರ್‌ಗೆ ಹೋದೆ. ಸಿನಿಮಾ ನೋಡಿದ ಬಳಿಕ ತಕ್ಷಣ ನಾನು ರಿಷಬ್‌ಗೆ ಕರೆ ಮಾಡಿದೆ. ಅವರು ನನ್ನ ಒಳ್ಳೆಯ ಸ್ನೇಹಿತ. ನಾನು ತುಂಬಾ ಗೌರವಿಸುವ ವ್ಯಕ್ತಿ ಎಂದು ಅಟ್ಲೀ ಪ್ರತಿಕ್ರಿಯಿಸಿದ್ದಾರೆ.

ರಿಷಬ್‌ ಅವರು ಇತರೆ ಸಿನಿಮಾ ನಿರ್ದೇಶಕರಿಗೆ ಸ್ಫೂರ್ತಿ. ಅವರ ಸಾಧನೆ ಊಹಿಸಲು ಅಸಾಧ್ಯ. ಒಬ್ಬ ನಿರ್ದೇಶಕನಾಗಿ ಅಂತಹ ಚಿತ್ರವನ್ನು ನಿರ್ವಹಿಸುವುದು ತುಂಬಾ ಕಷ್ಟ. ಅವರು ನಾಯಕ ನಟನಾಗಷ್ಟೇ ಪಾತ್ರವನ್ನು ನಿರ್ವಹಿಸಿಲ್ಲ. ಇಂತಹ ಸಿನಿಮಾ ಹೊರತರಲು ನಿಮ್ಮೊಳಗೆ ಸಾಕಷ್ಟು ಲಯ ಬೇಕಾಗುತ್ತದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: `ಕಾಂತಾರ’ ಮೆಚ್ಚಿದ ಅಟ್ಲಿ – ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ನೆನೆದ ಖ್ಯಾತ ನಿರ್ದೇಶಕ

ಅದ್ಭುತ ಸಿನಿಮಾ ಕೊಟ್ಟ ರಿಷಬ್‌ಗೆ ಹ್ಯಾಟ್ಸ್ ಆಫ್! ಅವರು ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಮತ್ತೊಮ್ಮೆ ರಾಷ್ಟ್ರೀಯ ಪ್ರಶಸ್ತಿಗಳಿಗೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ತಿಳಿಸಿದ್ದಾರೆ.

ಅ.2 ರಂದು ದೇಶ-ವಿದೇಶದಾದ್ಯಂತ ತೆರೆ ಕಂಡ ಕಾಂತಾರ ಚಾಪ್ಟರ್‌ 1 ಬ್ಲಾಕ್‌ಬಸ್ಟರ್‌ ಹಿಟ್‌ ಕಾಣುತ್ತಿದೆ. ಒಂದು ವಾರದಲ್ಲೇ ಗಲ್ಲಾಪೆಟ್ಟಿಗೆಯಲ್ಲಿ 509 ಕೋಟಿ ಕೊಳ್ಳೆ ಹೊಡೆದಿದೆ. ಕಾಂತಾರಗೆ ಎಲ್ಲೆಡೆ ಪ್ರೇಕ್ಷಕರಿಂದ ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ. ಸಿನಿಮಾರಂಗದ ಸ್ಟಾರ್‌ ನಟರು, ನಿರ್ದೇಶಕರು ಹಾಗೂ ಗಣ್ಯರು ರಿಷಬ್‌ ಶೆಟ್ಟಿಯ ಕಾಂತಾರ ಸಿನಿಮಾವನ್ನು ಹಾಡಿಹೊಗಳಿಸಿದ್ದಾರೆ.

Share This Article