ಲಕ್ನೋ: ಇತ್ತೀಚೆಗೆ ಪ್ರಯೋಗರಾಜ್‍ನಲ್ಲಿ (Prayagraj) ದುಷ್ಕರ್ಮಿಗಳಿಂದ ಹತ್ಯೆಯಾದ ರಾಜಕಾರಣಿ, ಗ್ಯಾಂಗ್‍ಸ್ಟರ್ ಅತೀಕ್ ಅಹ್ಮದ್ (Atiq Ahmad) ಅಕ್ರಮವಾಗಿ ಸಾವಿರಾರು ಕೋಟಿ ರೂ. ಆಸ್ತಿಯ ಒಡೆಯನಾಗಿದ್ದ ಎಂಬ ವಿಷಯ ಇದೀಗ ಬಯಲಾಗಿದೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಾದ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ಪತ್ರಕರ್ತರ ಸೋಗಿನಲ್ಲಿ ಬಂದು ಏಪ್ರಿಲ್ 16ರಂದು ಪ್ರಯಾಗ್‍ರಾಜ್‍ನಲ್ಲಿ ಗುಂಡು ಹಾರಿಸಿದ್ದರು. ಅತೀಕ್ ಮತ್ತು ಆತನ ಸಹೋದರನನ್ನು ಸಂದರ್ಶಿಸಲು ಬಂದಿದ್ದ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಗುಂಡಿನ ದಾಳಿ ನಡೆಸಿದ್ದರು.
ಅತೀಕ್ ಅಹ್ಮದ್‍ನ ಪಾತಕ ಕೃತ್ಯಗಳ ಜೊತೆಗೆ ಅಕ್ರಮ ಆಸ್ತಿಗಳ ಮೇಲೆ ಕಣ್ಣಿಟ್ಟಿದ್ದ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ಈತನನ್ನು ಹೆಡೆಮುರಿ ಕಟ್ಟುವ ಎಲ್ಲಾ ಯತ್ನಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೇ ಅತೀಕ್‍ಗೆ ಸೇರಿದ್ದ 1,169 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡಿದ್ದ ಈ ಆಸ್ತಿಗಳ ಪೈಕಿ 750 ಕೋಟಿ ರೂ. ಮೌಲ್ಯದ ಭೂಮಿ ಹಾಗೂ 417 ಕೋಟಿ ರೂ. ಮೌಲ್ಯದ ಇತರೆ ಆಸ್ತಿ (Property) ಸೇರಿವೆ. ಆದರೂ ಪೊಲೀಸರು ತನಿಖೆ ನಡೆಸಿದಷ್ಟು ಇನ್ನಷ್ಟು ಆಸ್ತಿಗಳು ಪತ್ತೆಯಾಗುತ್ತಲೇ ಇದೆ. ಇದನ್ನೂ ಓದಿ: ಅತೀಕ್ ಅಹ್ಮದ್ ಪ್ರಕರಣ – ಐವರು ಪೊಲೀಸರ ಅಮಾನತು
ಆದರೆ ಈಗಾಗಲೇ ಅತೀಕ್ ಹಾಗೂ ಆತನ ಸಹೋದರ ಹತ್ಯೆಗೀಡಾಗಿದ್ದಾನೆ. ಅತೀಕ್‍ನ ಮಗ ಕೂಡ ಎನ್‍ಕೌಂಟರ್‌ಗೆ ಬಲಿಯಾಗಿದ್ದಾನೆ. ಇನ್ನಿಬ್ಬರು ಪುತ್ರರು ಜೈಲು ಸೇರಿದ್ದಾರೆ. ಪತ್ನಿ ಪರಾರಿಯಾಗಿದ್ದಾಳೆ. ಹೀಗಾಗಿ ಅತೀಕ್‍ನ ನಿಜವಾದ ಆಸ್ತಿ ಎಂದಾದರೂ ಪೂರ್ಣ ಪ್ರಮಾಣದಲ್ಲಿ ಬಯಲಾಗುವುದೇ ಎಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಸ್ವಂತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅತೀಕ್ ಅಹ್ಮದ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‍ನಲ್ಲಿ 25 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದ. ಇದನ್ನೂ ಓದಿ: ಗ್ಯಾಂಗ್‍ಸ್ಟಾರ್ ಅತೀಕ್ ಅಹ್ಮದ್ ಬೆಂಬಲಿಗ ಕಾಂಗ್ರೆಸ್ ಸ್ಟಾರ್ ಪ್ರಚಾರಕ – ಕರಂದ್ಲಾಂಜೆ ಖಂಡನೆ